ಕಾಶ್ಮೀರದ ಸೈನಿಕ ಶಾಲೆಗೆ ಹುತಾತ್ಮ ಉಮರ್ ಫಯಾಜ್ ಹೆಸರು
ಶೋಪಿಯಾನ್,ಮೇ 13: ಜಮ್ಮುಕಾಶ್ಮೀರದಲ್ಲಿ ಉಗ್ರರ ಗುಂಪಿನಿಂದ ಅಪಹರಿಸಲ್ಪಟ್ಟು, ಹತ್ಯೆಗೀಡಾದ ಸೇನಾಧಿಕಾರಿ ಲೆ. ಉಮರ್ ಫಯಾಝ್ ಅವರ ನೆನಪಿಗಾಗಿ ಇಲ್ಲಿನ ಸೈನಿಕ ಶಾಲೆಗೆ ‘ ಲೆ. ಉಮ್ಮರ್ ಸದ್ಭಾವನಾ ಶಾಲೆ’’ ಎಂದು ಮರುನಾಮಕರಣಗೊಳಿಸಲು ಭಾರತೀಯ ಸೇನೆ ನಿರ್ಧರಿಸಿದೆ ಹಾಗೂ ಹುತಾತ್ಮ ಯೋಧನ ಕುಟುಂಬಕ್ಕೆ 75 ಲಕ್ಷ ರೂ.ಗಳ ಚೆಕ್‌ನ್ನು ಅದು ಹಸ್ತಾಂತರಿಸಿದೆ.
ಶೋಪಿಯಾನ್‌ನಲ್ಲಿ ಶನಿವಾರ ಫಯಾಝ್ ಅವರ ಕುಟುಂಬವನ್ನು ಭೇಟಿಯಾದ ಭೂಸೇನೆಯ ಕಮಾಂಡಿಂಗ್ ಜನರಲ್ ಆಫೀಸರ್ (ಜಿಓಸಿ), ಮೇಜರ್ ಜನರಲ್ ಬಿ.ಎಸ್.ರಾಜು, ಅವರು ಹುತಾತ್ಮ ಸೇನಾಧಿಕಾರಿಯ ಶೋಕತಪ್ತ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಯಾವುದೇ ಸಂದರ್ಭದಲ್ಲಿ ಕುಟುಂಬದ ನೆರವಿಗೆ ಸೇನೆಯು ಸಿದ್ಧವಿರುವುದು ಎಂದವರು ಭರವಸೆ ನೀಡಿದರೆಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.
‘‘ಲೆ. ಉಮ್ಮರ್ ಅವರ ಬರ್ಬರ ಕೊಲೆಗೆ ಕಾರಣರಾದವರನ್ನು ಕಾನೂನಿನಡಿ ಶಿಕ್ಷಿಸಲಾಗುವುದು ಎಂದು ಜಿಓಸಿ, ಕುಟುಂಬ ಸದಸ್ಯರಿಗೆ ಭರವಸೆ ನೀಡಿದರೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸೇನಾ ಸಾಮೂಹಿಕ ವಿಮಾ ನಿಧಿಯ 75 ಲಕ್ಷ ರೂ.ಗಳ ಚೆಕ್‌ನ್ನು ಅವರು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಿದರು ಹಾಗೂ ಶೋಪಿ.ಯಾನ್‌ನ ಸೈನಿಕ ಶಾಲೆಗೆ ಲೆ.ಉಮರ್ ಫಯಾಜ್ ಸದ್ಭಾವನಾ ಶಾಲೆ’ ಎಂದು ಮರುನಾಮಕರಣಗೊಳಿಸುವುದಾಗಿ ಘೋಷಿಸಿದರು.
ಕಾಶ್ಮೀರದವರಾದ 22 ವರ್ಷದ ಲೆ.ಉಮ್ಮರ್ ಫಯಾಝ್,ಮಂಗಳವಾರ ಸೋದರಸಂಬಂಧಿಯ ವಿವಾಹದಲ್ಲಿ ಪಾಲ್ಗೊಳ್ಳಲು ಕುಲ್‌ಗಾಮ್‌ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ, ಅವರನ್ನು ಮುಸುಕುಧರಿಸಿದ್ದ ಬಂಧೂಕುಧಾರಿಗಳು ಅಪಹರಿಸಿದ್ದರು.
ಹಲವಾರು ಬುಲೆಟ್ ಗಾಯಗಳಿದ್ದ ಅವರ ಮೃತದೇಹವು ಬುಧವಾರ ಬೆಳಗ್ಗೆ ಶೋಪಿಯಾನ್ ಜಿಲ್ಲೆಯ ಹರ್ಮೆನ್‌ನಲ್ಲಿ ಪತ್ತೆಯಾಗಿತ್ತು.
ರಾಜಪುತಾನಾ ರೈಫಲ್ಸ್‌ನ ಸೇನಾಧಿಕಾರಿಯಾದ ಉಮ್ಮರ್ ಫಯಾಜ್, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು.