×
Ad

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಧೋನಿ ಹೊಸ ದಾಖಲೆ

Update: 2017-05-13 23:30 IST

ಹೊಸದಿಲ್ಲಿ, ಮೇ 13: ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ವಿಕೆಟ್‌ಕೀಪರ್ ಎಂಎಸ್ ಧೋನಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಶುಕ್ರವಾರ ರಾತ್ರಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ ಹೊಸ ದಾಖಲೆ ನಿರ್ಮಿಸಿದರು.

ಶ್ರೀಲಂಕಾದ ಕುಮಾರ ಸಂಗಕ್ಕರ ದಾಖಲೆಯನ್ನು ಮುರಿದ ಭಾರತದ ಮಾಜಿ ನಾಯಕ ಧೋನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 124 ಕ್ಯಾಚ್ ಪಡೆದ ಏಕೈಕ ವಿಕೆಟ್‌ಕೀಪರ್ ಎಂಬ ಕೀರ್ತಿಗೆ ಭಾಜನರಾದರು.

ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್‌ನಲ್ಲಿ ಡೇನಿಯಲ್ ಕ್ರಿಸ್ಟಿಯನ್ ಬೌಲಿಂಗ್‌ನಲ್ಲಿ ಮರ್ಲಾನ್ ಸ್ಯಾಮುಯೆಲ್ಸ್ ನೀಡಿದ ಕ್ಯಾಚ್‌ನ್ನು ಪಡೆದಿದ್ದ ಧೋನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ಯಾಮುಯೆಲ್ ಅವರು ಕ್ರಿಸ್ಟಿಯನ್ ಎಸೆತವನ್ನು ಹುಕ್ ಮಾಡಲು ಹೋಗಿ ಧೋನಿ ನೀಡಿದ ಅದ್ಭುತ ಕ್ಯಾಚ್‌ಗೆ ಔಟಾಗಿದ್ದರು.

ಧೋನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 261 ಪಂದ್ಯಗಳನ್ನು ಆಡಿದ್ದು ಒಟ್ಟು 124 ಕ್ಯಾಚ್ ಪಡೆದಿದ್ದಾರೆ. ಸಂಗಕ್ಕರ 235 ಪಂದ್ಯಗಳಲ್ಲಿ 123 ಕ್ಯಾಚ್‌ಗಳನ್ನು ಪಡೆದಿದ್ದು ಇದು ಈತನಕದ ದಾಖಲೆಯಾಗಿತ್ತು. ಧೋನಿ(64 ಸ್ಟಂಪಿಂಗ್) ಪಾಕ್‌ನ ಕಮ್ರಾನ್ ಅಕ್ಮಲ್(99) ಬಳಿಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಟಂಪಿಂಗ್ ಮಾಡಿದ ಸಾಧನೆ ಮಾಡಿದ್ದಾರೆ.

2006ರಲ್ಲಿ ಜೋಹನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಚೊಚ್ಚಲ ಟ್ವೆಂಟಿ-20 ಪಂದ್ಯಗಳನ್ನಾಡಿರುವ 35ರ ಪ್ರಾಯದ ಧೋನಿ ಭಾರತ ಕ್ರಿಕೆಟ್ ತಂಡ, ಚೆನ್ನೈ ಸೂಪರ್ ಕಿಂಗ್ಸ್, ಜಾರ್ಖಂಡ್ ಕ್ರಿಕೆಟ್ ತಂಡ ಹಾಗೂ ಪುಣೆ ತಂಡದ ಪರ ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News