ಜಿಹಾದ್ ಹೆಸರಿನಲ್ಲಿ ಭೀತಿವಾದವನ್ನು ಹರಡುತ್ತಿರುವ ಹಫೀಝ್ ಸಯೀದ್: ಪಾಕ್

Update: 2017-05-14 11:06 GMT

  ಲಾಹೋರ,ಮೇ 14: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಮತ್ತು ಜಮಾತ್-ಉದ್ ದಾವಾ (ಜೆಯುಡಿ)ದ ಮುಖ್ಯಸ್ಥ ಹಫೀಝ್ ಸಯೀದ್ ಮತ್ತು ಆತನ ನಾಲ್ವರು ಸಹಚರರನ್ನು ಜಿಹಾದ್ ಹೆಸರಿನಲ್ಲಿ ಭೀತಿವಾದವನ್ನು ಹರಡುತ್ತಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯವು ನ್ಯಾಯಾಂಗ ಪುನರ್‌ಪರಿಶೀಲನಾ ಮಂಡಳಿಗೆ ತಿಳಿಸಿದೆ.

ಶನಿವಾರ ಮೂವರು ಸದಸ್ಯರ ಮಂಡಳಿಯ ಎದುರು ಹಾಜರಾಗಿದ್ದ ಸಯೀದ್, ಕಾಶ್ಮೀರಿಗಳ ಪರವಾಗಿ ತಾನು ಧ್ವನಿಯೆತ್ತುತ್ತಿರುವುದನ್ನು ನಿಲ್ಲಿಸಲು ಪಾಕಿಸ್ತಾನ ಸರಕಾರವು ತನ್ನನ್ನು ಬಂಧಿಸಿದೆ ಎಂದು ತಿಳಿಸಿದ. ಆದರೆ ಆತನ ವಾದವನ್ನು ತಿರಸ್ಕರಿಸಿದ ಆಂತರಿಕ ಸಚಿವಾಲಯವು, ಜಿಹಾದ್ ಹೆಸರಿನಲ್ಲಿ ಭೀತಿವಾದವನ್ನು ಹರಡುತ್ತಿರುವುದಕ್ಕಾಗಿ ಸಯೀದ್ ಮತ್ತು ಆತನ ನಾಲ್ವರು ಸಹಚರರನ್ನು ಬಂಧಿಸಲಾಗಿದೆ ಎಂದು ತಿಳಿಸಿತು.

  ಸಯೀದ್ ಮತ್ತು ಆತನ ಸಹಚರರಾದ ಝಾಫರ್ ಇಕ್ಬಾಲ್, ಅಬ್ದುಲ್ ರಹಿಮಾನ್ ಆಬಿದ್, ಅಬ್ದುಲ್ಲಾ ಉಬೈದ್ ಮತ್ತು ಖಾಜಿ ಕಾಶಿಫ್ ನಿಯಾಝ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಯನ್ನು ಮುಂದಿನ ವಿಚಾರಣಾ ದಿನಾಂಕವಾದ ಮೇ 15ರಂದು ತನಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇಜಾಝ್ ಅಫ್ಝಲ್ ಖಾನ್ ನೇತೃತ್ವದ ಮಂಡಳಿಯು ಸಚಿವಾಲಯಕ್ಕೆ ನಿರ್ದೇಶ ನೀಡಿತು. ಮುಂದಿನ ವಿಚಾರಣೆ ವೇಳೆ ಮಂಡಳಿಯೆದುರು ಖುದ್ದಾಗಿ ಹಾಜರಾಗುವಂತೆ ಪಾಕಿಸ್ತಾನದ ಅಟಾರ್ನಿ ಜನರಲ್‌ಗೂ ಅದು ನಿರ್ದೇಶ ನೀಡಿತು.

  ಪೊಲೀಸರು ಭಾರೀ ಭದ್ರತೆಯ ನಡುವೆ ಸಯೀದ್ ಮತ್ತು ಆತನ ನಾಲ್ವರು ಸಹಚರರನ್ನು ಸರ್ವೋಚ್ಚ ನ್ಯಾಯಾಲಯದ ಲಾಹೋರ ರಿಜಿಸ್ಟ್ರಿಯಲ್ಲಿ ಮಂಡಳಿಯ ಎದುರು ಹಾಜರು ಪಡಿಸಿದ್ದರು. ನ್ಯಾಯಾಲಯದ ಹೊರಗೆ ಭಾರೀ ಸಂಖ್ಯೆಯಲ್ಲಿ ಸಯೀದ್‌ನ ಬೆಂಬಲಿಗರು ಸೇರಿದ್ದರು.

ತನ್ನ ವಕೀಲ ಎ.ಕೆ.ಡೋಗರ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರೂ ತನ್ನ ಪರವಾಗಿ ತಾನೇ ವಾದಿಸಿದ ಸಯೀದ್, ತನ್ನ ವಿರುದ್ಧ ಸರಕಾರವು ಹೊರಿಸಿರುವ ಆರೋಪಗಳನ್ನು ಯಾವುದೇ ಸರಕಾರಿ ಸಂಸ್ಥೆ ಎಂದಿಗೂ ಸಾಬೀತುಗೊಳಿಸಿಲ್ಲ. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಧ್ವನಿಯೆತ್ತುತ್ತಿರುವುದಕ್ಕಾಗಿ ಮತ್ತು ಕಾಶ್ಮೀರ ವಿಷಯದಲ್ಲಿ ಸರಕಾರದ ದುರ್ಬಲ ನೀತಿಯನ್ನು ಟೀಕಿಸುತ್ತಿರುವುದಕ್ಕಾಗಿ ತನ್ನನ್ನು ಮತ್ತು ತನ್ನ ಸಂಸ್ಥೆಯನ್ನು ಬಲಿಪಶು ಮಾಡಲಾಗಿದೆ ಎಂದು ತಿಳಿಸಿದ. ತನ್ನ ಬಂಧನದ ಪಂಜಾಬ್ ಸರಕಾರದ ಆದೇಶವನ್ನು ರದ್ದುಗೊಳಿಸುವಂತೆ ಆತ ಕೋರಿಕೊಂಡ.

ಪಂಜಾಬ್ ಸರಕಾರವು ಕಳೆದ ಜ.30ರಿಂದ ಸಯೀದ್ ಮತ್ತು ಆತನ ಸಹಚರರನ್ನು ಗೃಹಬಂಧನದಲ್ಲಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News