ಅಪನಂಬಿಕೆಯಿಂದಾಗಿ ಸ್ವಾತಂತ್ರ್ಯ ಹೋರಾಟದ ಮುಸ್ಲಿಮರ ಪಾತ್ರ ಗೌಣ: ಅಮೀನ್‌ ಮಟ್ಟು

Update: 2017-05-14 13:15 GMT

ಮಂಗಳೂರು, ಮೇ 14: ಸ್ವಾತಂತ್ರ್ಯ ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ದೇಶ ವಿಭಜನೆಯ ನೆಲೆಯಲ್ಲಿ ಅನುಮಾನ, ಅಪನಂಬಿಕೆಯಿಂದ ವಿಮರ್ಶಿಸಲು ಹೊರಟ ಹಿನ್ನೆಲೆಯಿಂದ ಸ್ವಾತಂತ್ರ ಹೋರಾಟದಲ್ಲಿನ ಮುಸ್ಲಿಮರ ಪಾತ್ರದ ಚರ್ಚೆ, ಉಲ್ಲೇಖ ಮರೆಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅಭಿಪ್ರಾಯಿಸಿದ್ದಾರೆ.

ಬಲ್ಮಠದ ಶಾಂತಿ ನಿಲಯದಲ್ಲಿ ಡಿವೈಎಫ್‌ಐ ವತಿಯಿಂದ ಆಯೋಜಿಸಲಾದ "ಮುಸ್ಲಿಂ ಯುವ ಸಮಾವೇಶ"ದಲ್ಲಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ದೇಶ ವಿಭಜನೆಯ ಹಿನ್ನೆಲೆಯಲ್ಲಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರಿಂದ ಸ್ವಾತಂತ್ರ್ಯ ಹೋರಾಟದಲ್ಲಿನ ಮುಸ್ಲಿಮರ ಬಗ್ಗೆ ಉಲ್ಲೇಖಗಳು ಗೌಣವಾಗಿಬಿಟ್ಟಿವೆ. ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮೆಲುಕು ಹಾಕುವಾಗ, ಹಿಂದೂ ಮತ್ತು ಮುಸ್ಲಿಮರ ನಡುವೆ ಈ ದ್ವೇಷ, ಅಪನಂಬಿಕೆ, ಅನುಮಾನ ಸಂಬಂಧ ಬೆಳೆಯಲು ಬ್ರಿಟಿಷರ ವ್ಯಾಪಾರ ಮನೋಭಾವವೂ ಬಹು ದೊಡ್ಡ ಕೊಡುಗೆಯಾಗಿದೆ ಎಂದು ಅವರು ವಿಶ್ಲೇಷಿಸಿದರು.

ಸ್ವಾತಂತ್ರ್ಯ ಹೋರಾಟ ಎನ್ನುವುದು ದೀರ್ಘವಾದ ಇತಿಹಾಸದಿಂದ ಕೂಡಿರುವಂತದ್ದು. ತಮ್ಮ 700 ವರ್ಷಗಳ ಅರಸೊತ್ತಿಗೆ ಆಳ್ವಿಕೆಯ ವೇಳೆ ಬ್ರಿಟಿಷರ ಪ್ರವೇಶವಾದಾಗ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದಲೂ ಬ್ರಿಟಿಷರ ವಿರುದ್ಧ ಸೆಟೆದು ನಿಲ್ಲುವುದು ಮುಸ್ಲಿಮರಿಗೆ ಅನಿವಾರ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಮ್ಮೆಲ್ಲವನ್ನೂ ಕಳೆದುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮುಸ್ಲಿಮರ ಬಗ್ಗೆ ಚರ್ಚೆಯೇ ಆಗದಿರುವುದು ದೊಡ್ಡ ಲೋಪವೆಂದೇ ಹೇಳಬಹುದು. ಸಿಪಾಯಿ ದಂಗೆಯೊಂದರಲ್ಲೇ 27,000 ಮುಸ್ಲಿಮರು ಪ್ರಾಣ ಕಳೆದುಕೊಂಡಿದ್ದಾರೆಂಬ ಬಗ್ಗೆ ಉಲ್ಲೇಖವಿದ್ದರೂ ಈ ಬಗ್ಗೆ ಚರ್ಚೆಯಾಗಿಲ್ಲ. ದೇಶಕ್ಕೆ ಸ್ವಾತಂತ್ರ ಅಹಿಂಸಾತ್ಮಕ ಚಳವಳಿಯಿಂದಲೇ ಸ್ವಾತಂತ್ರ್ಯ ಲಭಿಸಿತು ಎಂಬ ನಂಬಿಕೆಯೂ ಇದಕ್ಕೆ ಮತ್ತೊಂದು ಕಾರಣವಾಗಿರಬಹುದು ಎಂದವರು ಹೇಳಿದರು.

ಕೋಮುಗಲಭೆಯ ಹಿಂದಿರುವುದು ವ್ಯಾಪಾರಿ ಮನೋಭಾವ: ದಕ್ಷಿಣ ಕನ್ನಡವನ್ನು ಕೋಮುವಾದದ ಪ್ರಯೋಗ ಶಾಲೆ ಎನ್ನಲಾಗುತ್ತದೆ. ಇದರ ಆಳವನ್ನು ಅರಿಯಲು ಹೊರಟಾಗ ಇದರ ಹಿಂದಿರುವುದು ವ್ಯಾಪಾರಿಗಳು ಎಂಬುದು ಸ್ಪಷ್ಟವಾಗುತ್ತದೆ. ದಕ್ಷಿಣ ಕನ್ನಡದಲ್ಲಿ ವ್ಯಾಪಾರ ಮಾಡುವವರಲ್ಲಿ ಹಿಂದೂಗಳಂತೆ ಮುಸ್ಲಿಮರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಕೋಮುಗಲಭೆಯಾಗಿ ಮುಸ್ಲಿಂ ವ್ಯಾಪಾರಿಯ ಅಂಗಡಿ ಸುಟ್ಟು ಹೋದಲ್ಲಿ ಅದರ ಲಾಭ ಯಾರಿಗೆ ಆಗುತ್ತದೆ? ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳಬಹುದು. ಹಾಗಾಗಿ ಕೋಮುಗಲಭೆಗಳಿಗೆ ಧಾರ್ಮಿಕ ಕಾರಣಕ್ಕಿಂತಲೂ ಮುಖ್ಯವಾಗಿ ವ್ಯಾಪಾರಿ ಕಾಣಗಳಿವೆ ಎಂಬ ವಾಸ್ತವವನ್ನು ಅರಿಯಬೇಕಾಗಿದೆ ಎಂದವರು ಹೇಳಿದರು.

ಭೂಭಾಗದ ಹಂಚಿಕೆಯೂ ವೈಷ್ಯಮಕ್ಕೆ ಕಾರಣ: ದೇಶದಲ್ಲಿ ಹಿಂದೂ ಮುಸ್ಲಿಮರ ನಡುವಿನ ವೈಷಮಕ್ಕೆ ಭೂಭಾಗದ ಹಂಚಿಕೆಯೂ ಒಂದು ಕಾರಣ. ಮನೆಯವರಿಗೆ ಹೊರಗಿನಿಂದ ಸಮಾನ ಶತ್ರುವಿದ್ದಾಗ ಮನೆಯೊಳಗೆ ಜಗಳವಾಗುವುದಿಲ್ಲ. ಆದರೆ ಶತ್ರುವೇ ಇಲ್ಲದಾಗ ಮನೆಯಲ್ಲಿ ಭಿನ್ನಾಭಿಪ್ರಾಯ ಹುಟ್ಟಿಕೊಳ್ಳುವಂತೆಯೇ, ಬ್ರಿಟಿಷರ ವಿರುದ್ಧದ ಹೋರಾಟಕ್ಕಾಗಿ ಹಿಂದೂ- ಮುಸ್ಲಿಮರು ಒಟ್ಟಾಗುವುದು ಸಹಜ. ಆದರೆ ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶ, ಟರ್ಕಿ, ಇರಾನ್ ಮೊದಲಾದ ನಮ್ಮ ನೆರೆಯ ರಾಷ್ಟ್ರಗಳು ಮುಸ್ಲಿಂ ರಾಷ್ಟ್ರಗಳು. ಪಾಕಿಸ್ತಾನವನ್ನು ಶತ್ರುರಾಷ್ಟ್ರವಾಗಿ ನೋಡುವ ಕಾರಣಕ್ಕೆ ಪಕ್ಕದಲ್ಲಿರುವ ಮುಸಲ್ಮಾನರನ್ನೂ ಶತ್ರುವಾಗಿ ನೋಡಲಾಗುತ್ತದೆ. ಆದರೆ ನಮ್ಮ ನಿಜವಾದ ಶತ್ರು ದೂರದಲ್ಲಿರುವ ಚೀನಾ ಮತ್ತು ಅಮೆರಿಕ ಎಂಬ ವಾಸ್ತವದ ಬಗ್ಗೆ ನಾವು ಮಾತನಾಡುವುದಿಲ್ಲ. ಇಂತಹ ವಿಲಕ್ಷಣಗಳು ಸ್ವಾತಂತ್ರ್ಯ ಕಾಲದಿಂದಲೂ ನಡೆದು ಬಂದಿದೆ ಎಂದು ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದರು.

ನಾಯಕರನ್ನು ಗುರುತಿಸುವ ಕೆಲಸವಾಗಲಿ
ಸಮುದಾಯಗಳಲ್ಲಿ ನಾಯಕರ ಆಯ್ಕೆಯೂ ಬಹು ಮುಖ್ಯ ಅಂಶ ಎಂದು ಅಭಿಪ್ರಾಯಿಸಿದ ದಿನೇಶ್ ಅಮೀನ್‌ಮಟ್ಟು, ಮುಸ್ಲಿಮ್ ಸಮುದಾಯವೂ ಸೇರಿದಂತೆ ಸಮುದಾಯಗಳು ಉದಾರವಾದ, ಪ್ರಗತಿಪರವಾದ ನಾಯಕರನ್ನು ಬಹಳ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಕರ್ನಾಟಕದ ಮಟ್ಟಿಗೆ ಮಾಜಿ ಸಚಿವ ಬಿ.ಎ. ಮೊಯ್ದೀನ್‌ರಂತಹ ನಾಯಕರಿದ್ದಾರೆ. ಮೊಯ್ದೀನ್‌ರನ್ನು ಇತ್ತೀಚೆಗೆ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು. ಆದರೆ ಅವರನ್ನು ಸುಮಾರು 20 ವರ್ಷಗಳ ಹಿಂದೆಯೇ ಸನ್ಮಾನಿಸಿದ್ದರೆ, ಅವರು ರಾಜಕೀಯದಿಂದ ದೂರ ಉಳಿಯುತ್ತಿರಲಿಲ್ಲ ಎಂಬುದು ನನ್ನ ಅನಿಸಿಕೆ. ನಾಯಕರನ್ನು ಗುರುತಿಸುವ ಕೆಲಸವನ್ನು ಸಮುದಾಯ ಮಾಡಬೇಕು ಎಂದು ಹೇಳಿದರು.

ಮುಸ್ಲಿಂ ರಾಜರು ಮತಾಂತರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಮುಸ್ಲಿಂ ಅರಸೊತ್ತಿಗೆ ಈ ದೇಶದಲ್ಲಿ 700 ವರ್ಷಗಳ ಕಾಲ ರಾಜ್ಯಭಾರ ನಡೆಸಿದೆ. ಹಾಗೊಂದು ವೇಳೆ ಮತಾಂತರವಾಗಿದ್ದಲ್ಲಿ ಇಂದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಕೇವಲ ಶೇ. 14ರಷ್ಟಾಗಿರಲು ಸಾಧ್ಯವೇ ಎಂಬುದು ಚಿಂತಿಸಬೇಕಾದ ವಿಷಯ. ಕೋಮುವಾದವನ್ನು ವಿರೋಧಿಸುವ ಜತೆಯಲ್ಲೇ ಅದನ್ನು ನಿರ್ಮೂಲನೆ ಮಾಡುವ ಬಗ್ಗೆಯೂ ಆಲೋಚಿಸಬೇಕಿದೆ. ಮೇಲರಿಮೆ ಹಾಗೂ ಎಲ್ಲವೂ ನಮ್ಮ ನಿಯಂತ್ರಣದಲ್ಲಿರಬೇಕೆಂಬ ನೆಲೆಯಲ್ಲಿ ಬಹುಸಂಖ್ಯಾತ ಕೋಮುವಾದ ಹುಟ್ಟಿಕೊಂಡರೆ, ಅಲ್ಪಸಂಖ್ಯಾತರಾಗಿರುವ ಸಂದರ್ಭ ಅಭದ್ರತೆಯೂ ಕೋಮುವಾದ ಸೃಷ್ಟಿಗೆ ಕಾರಣವಾಗುತ್ತದೆ ಎಂದು ದಿನೇಶ್ ಅಮೀನ್ ಮಟ್ಟು ವ್ಯಾಖ್ಯಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News