ಜಾಗತಿಕ ಸೈಬರ್ ದಾಳಿ ಪ್ರಕರಣ: ಸೋಮವಾರ ಮತ್ತಷ್ಟು ಆಘಾತದ ಸಾಧ್ಯತೆ ; ತಜ್ಞರ ಎಚ್ಚರಿಕೆ
ಹೊಸದಿಲ್ಲಿ, ಮೇ 14: ಅಭೂತಪೂರ್ವ ಮತ್ತು ಭಯಾನಕ ಸೈಬರ್ ದಾಳಿಯಿಂದ ಕನಿಷ್ಟ 150 ದೇಶಗಳ 2 ಲಕ್ಷಕ್ಕೂ ಹೆಚ್ಚು ಮಂದಿ ತೊಂದರೆಗೊಳಗಾಗಿರುವ ಬೆನ್ನಿಗೇ, ಇದೀಗ ಸೋಮವಾರ (ಮೇ 15ರಂದು) ಮತ್ತಷ್ಟು ಆಘಾತಕ್ಕೆ ಸಿದ್ಧರಾಗಿರುವಂತೆ ಸಿಂಗಾಪುರ ಮೂಲದ ಭದ್ರತಾ ಸಂಶೋಧಕರು ಎಚ್ಚರಿಸಿದ್ದಾರೆ. ಕಂಪ್ಯೂಟರ್ ಬಳಸುವವರು ಸೋಮವಾರ ಮತ್ತೆ ತಮ್ಮ ಕಚೇರಿಗೆ ತೆರಳಿ ಕೆಲಸ ಆರಂಭಿಸುವಾಗ ಇಂತಹ ಇ-ಮೇಲ್ ಆಮಿಷಕ್ಕೆ ಬಲಿಯಾಗುವ ಸಾಧ್ಯತೆಯಿದೆ. ಅಲ್ಲದೆ ಇದುವರೆಗೆ ನಡೆಯದ ರೀತಿಯಲ್ಲಿ ಸೈಬರ್ ದಾಳಿ ಮುಂದುವರಿಯುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಸೈಬರ್‌ದಾಳಿ ಅತ್ಯಂತ ವಿಶಿಷ್ಟವಾಗಿದೆ ಎಂದು ಬ್ರಿಟನ್‌ನ ಯುರೋಪೋಲ್ ಸಂಸ್ಥೆಯ ನಿರ್ದೇಶಕ ರಾಬ್ ವೆನ್‌ರೈಟ್ ತಿಳಿಸಿದ್ದಾರೆ. ಈ ದಾಳಿ ಜಾಗತಿಕ ಮಟ್ಟದಲ್ಲಿ ಹಬ್ಬಿರುವ ವೇಗ ಅಭೂತಪೂರ್ವವಾಗಿದೆ. ಇದುವರೆಗಿನ ಮಾಹಿತಿ ಪ್ರಕಾರ ಕನಿಷ್ಟ 150 ದೇಶಗಳ 2 ಲಕ್ಷ ಕಂಪ್ಯೂಟರ್ ಗೆ ತೊಂದರೆಯಾಗಿದೆ. ಇವರಲ್ಲಿ ಬಹುತೇಕ ಕಂಪ್ಯೂಟರ್ ಬೃಹತ್ ಉದ್ಯಮಿಗಳಿಗೆ ಸೇರಿದ್ದು ಎಂದು ಅವರು ತಿಳಿಸಿದ್ದಾರೆ.
ಈಗ ನಮಗೆದುರಾಗಿರುವ ಬೆದರಿಕೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇಂದು(ಸೋಮವಾರ) ಜನರು ಕಂಪ್ಯೂಟರ್‌ನಲ್ಲಿ ಕೆಲಸ ಆರಂಭಿಸುವಾಗ ಈ ಬೆದರಿಕೆಯ ಪ್ರಮಾಣ ಯಾವ ಮಟ್ಟವನ್ನು ತಲುಪಬಹುದು ಎಂಬುದು ಊಹಿಸಲಸಾಧ್ಯ ಎಂದವರು ಹೇಳಿದ್ದಾರೆ.
ಈ ಕ್ರಿಮಿನಲ್ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ಇದುವರೆಗೆ ತಿಳಿದು ಬಂದಿಲ್ಲ. ಕ್ರಿಮಿನಲ್ ಕೃತ್ಯ ಎಂದ ಮೇಲೆ ಅಲ್ಲಿ ಬಹುತೇಕ ಹಣಕ್ಕೆ ಬೇಡಿಕೆ ಇರಲೇಬೇಕು. ಆದರೆ ಇಲ್ಲಿರುವ ಬೇಡಿಕೆ 300 ಡಾಲರ್ ಮಾತ್ರ. ಇದನ್ನು ಮೂರು ದಿನದೊಳಗೆ ಪಾವತಿಸದಿದ್ದರೆ ಈ ಮೊತ್ತ 600 ಡಾಲರ್‌ಗೆ ಏರುತ್ತದೆ ಎಂದವರು ಬೆದರಿಸುತ್ತಾರೆ. ಕೆಲವರು ಹಣ ಪಾವತಿಸಿದ್ದಾರೆ. ಆದರೆ ಹೆಚ್ಚಿನವರು ಹಣ ನೀಡಿಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ಈ ದುಷ್ಕರ್ಮಿಗಳು ಹೆಚ್ಚಿನ ಹಣ ಸಂಪಾದಿಸಲು ಇದುವರೆಗೆ ಸಾಧ್ಯವಾಗಿಲ್ಲ ಎಂದು ವೆನ್‌ರೈಟ್ ಹೇಳಿದ್ದಾರೆ.
ಆರೋಗ್ಯರಕ್ಷಣೆ ಕ್ಷೇತ್ರದಲ್ಲಿ ಸೈಬರ್ ಭದ್ರತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ(ಎನ್‌ಎಚ್‌ಎಸ್)ದ ಸೇವೆಗಳಿಗೆ ಹಾನಿಯಾಗಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸಿದರು.
ಬ್ರಿಟನ್ ಸರಕಾರ ಎನ್‌ಎಚ್‌ಎಸ್ ಸೇವೆಗೆ ಬಳಸಲಾಗುವ ಕಂಪ್ಯೂಟರ್ ವ್ಯವಸ್ಥೆಯ ಸುಧಾರಣೆಗೆ 50 ಮಿಲಿಯನ್ ಪೌಂಡ್ ವಿನಿಯೋಗಿಸಿದೆ. ಎನ್‌ಎಚ್‌ಎಸ್ ಸೇವೆಯನ್ನು ಗುರಿಯಾಗಿಸಿಕೊಂಡು ಈ ಸೈಬರ್ ದಾಳಿ ನಡೆದಿಲ್ಲ. ನಮ್ಮ ಕಂಪ್ಯೂಟರ್ ವ್ಯವಸ್ಥೆಯನ್ನು ನಾವು ಸಾಕಷ್ಟು ಸುಧಾರಿಸಿದ್ದೇವೆ ಎಂದು ಬ್ರಿಟನ್‌ನ ರಕ್ಷಣಾ ಸಚಿವ ಮೈಕೆಲ್ ಫಲೋನ್ ಬಿಬಿಸಿಗೆ ತಿಳಿಸಿದ್ದಾರೆ.
ಸೈಬರ್ ದಾಳಿಯ ವಿರುದ್ಧ ರಕ್ಷಣೆ ಪಡೆಯುವ ಕುರಿತು ಅಮೆರಿಕ ಸರಕಾರ ಶನಿವಾರ ತಾಂತ್ರಿಕ ಸಲಹೆ ನೀಡಿದ್ದು, ಸಂತ್ರಸ್ತರು ಎಫ್‌ಬಿಐಗೆ ಅಥವಾ ಆಂತರಿಕ ಭದ್ರತಾ ಸಮಿತಿಗೆ ದೂರು ನೀಡುವಂತೆ ತಿಳಿಸಿದೆ.
ಭಾರತದಲ್ಲಿ ಅಂತರ್‌ಜಾಲ ಕ್ಷೇತ್ರದ ಭದ್ರತೆಯ ಕುರಿತು , ಹ್ಯಾಕಿಂಗ್ ಮುಂತಾದ ಕ್ರಿಮಿನಲ್ ಕತ್ಯದ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ 'ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್(ಸಿಇಆರ್‌ಟಿ) 'ಗಂಭೀರ ಪರಿಸ್ಥಿತಿ'ಯ ಎಚ್ಚರಿಕೆ ನೀಡಿದೆ.
ಇ-ಮೇಲ್ ಅಟ್ಯಾಚ್‌ಮೆಂಟ್ ಮೂಲಕ ಈ ಸಾಪ್ಟ್‌ವೇರ್ ಅನ್ನು ಕಳಿಸಲಾಗುತ್ತದೆ. ಇದನ್ನು ಓಪನ್ ಮಾಡಿದೊಡನೆ ಕಂಪ್ಯೂಟರ್‌ಗೆ ಡೌನ್‌ಲೋಡ್ ಆಗುತ್ತದೆ ಮತ್ತು ಅದರಲ್ಲಿನ ಎಲ್ಲಾ ಫೈಲ್‌ಗಳನ್ನೂ ಲಾಕ್ ಮಾಡುತ್ತದೆ. ಈ ಫೈಲ್ ಓಪನ್ ಮಾಡಬೇಕಾದರೆ ಹಣ ಪಾವತಿ ಮಾಡುವುದು ಬಿಟ್ಟರೆ ಬೇರೆ ದಾರಿಯಿಲ್ಲ.
ಈ ದಾಳಿ ಎಷ್ಟೊಂದು ಚಾಣಾಕ್ಷ ರೀತಿಯಲ್ಲಿ ನಡೆಯುತ್ತದೆ ಎಂದರೆ- ಪ್ಲೀಸ್ ರೀಡ್ ಮಿ.. ಟಿಎಕ್ಸ್‌ಟಿ.. ಎಂಬ ಹೆಸರಿನ ಫೈಲ್ ಕಳಿಸುವ ಮೂಲಕವೂ ಕಂಪ್ಯೂಟರ್ ಹ್ಯಾಕ್ ಮಾಡಲಾಗುತ್ತಿದೆ. ಕುತೂಹಲದಿಂದ ಇದನ್ನು ಓಪನ್ ಮಾಡಿದೊಡನೆ ಆ ಕಂಪ್ಯೂಟರ್ ಹ್ಯಾಕ್ ಆಗುತ್ತದೆ ಮತ್ತು ಇದರಿಂದ ಹೊರಬರಬೇಕಾದರೆ ಯಾವ ರೀತಿ ಮತ್ತು ಎಷ್ಟು ಹಣ ಪಾವತಿಸಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ.