ಪ್ಲೇ -ಆಫ್‌ಗೇರಿದ ಪುಣೆ ಸೂಪರ್‌ಜೈಂಟ್
ಪುಣೆ, ಮೇ 14: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 55ನೆ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ್ದು, ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದೊಂದಿಗೆ ಪ್ಲೇ ಆಫ್‌ಗೆ ತೆರ್ಗಡೆಯಾಗಿದೆ.
ಮೇ 16ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸಲಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 74 ರನ್‌ಗಳ ಸುಲಭದ ಸವಾಲನ್ನು ಪಡೆದ ಪುಣೆ ತಂಡ ಇನ್ನೂ 48 ಎಸೆತಗಳನ್ನು ಬಾಕಿ ಉಳಿಸಿ 1 ವಿಕೆಟ್ ನಷ್ಟದಲ್ಲಿ 78 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ಮತ್ತು ರಾಹುಲ್ ತ್ರಿಪಾಠಿ ತಾಳ್ಮೆಯಿಂದ ಬ್ಯಾಟ್ ಮಾಡಿ 5.2 ಓವರ್‌ಗಳಲ್ಲಿ 41 ರನ್ ಸೇರಿಸಿದರು. ಆದರೆ 5.3ನೆ ಓವರ್‌ನಲ್ಲಿ ಅಕ್ಷರ್ ಪಟೇಲರ ಎಸೆತವನ್ನು ಎದುರಿಸುವಲ್ಲಿ ಎಡವಿದ ತ್ರಿಪಾಠಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ತ್ರಿಪಾಠಿ 28 ರನ್(20ಎ, 4ಬೌ,1ಸಿ) ಗಳಿಸಿದರು.
ಎರಡನೆ ವಿಕೆಟ್‌ಗೆ ರಹಾನೆಗೆ ನಾಯಕ ಸ್ಟೀವ್ ಸ್ಮಿತ್ ಜೊತೆಯಾದರು. ಇವರು ಎರಡನೆ ವಿಕೆಟ್‌ಗೆ ಜೊತೆಯಾಟದಲ್ಲಿ 37 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರಹಾನೆ ಅವರು ಔಟಾಗದೆ 34ರನ್ ಮತ್ತು ಸ್ಮಿತ್ ಔಟಾಗದೆ 15ರನ್ ಗಳಿಸಿದರು.
12ನೆ ಓವರ್‌ನಲ್ಲಿ ಮ್ಯಾಕ್ಸ್‌ವೆಲ್‌ರ ಕೊನೆಯ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದ ಮ್ಯಾಕ್ಸ್‌ವೆಲ್ ಗೆಲುವಿನ ರನ್ ಗಳಿಸಿದರು. ಕಿಂಗ್ಸ್ ಇಲೆವೆನ್ 14ಪಂದ್ಯಗಳಲ್ಲಿ 7 ನೆ ಸೋಲು ಅನುಭವಿಸಿ ಪ್ಲೇ ಆಫ್ ಅವಕಾಶವನ್ನು ಕೈ ಚೆಲ್ಲಿತು. ಅಂಕಪಟ್ಟಿಯಲ್ಲಿ 5ನೆ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತು.
ಪಂಜಾಬ್‌ನ ಕಳಪೆ ಪ್ರದರ್ಶನ: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 15.5 ಓವರ್‌ಗಳಲ್ಲಿ 73 ರನ್‌ಗಳಿಗೆ ಆಲೌಟಾಗಿತ್ತು. ಪಂಜಾಬ್ ಒಂದು ವೇಳೆ ಗೆಲುವು ಸಾಧಿಸಿದ್ದರೆ ನಾಲ್ಕನೆ ಸ್ಥಾನದೊಂದಿಗೆ ಪ್ಲೇಆಫ್ ಸ್ಥಾನ ಪಡೆಯುವ ಅವಕಾಶ ಇತ್ತು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಇನಿಂಗ್ಸ್ ಆರಂಭ ಚೆನ್ನಾಗಿರಲಿಲ್ಲ. ಪುಣೆ ತಂಡದ ಜೈದೇವ್ ಉನದ್ಕಟ್ ಅವರ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್(0) ಅವರು ಮನೋಜ್ ತಿವಾರಿಗೆ ಕ್ಯಾಚ್ ನೀಡುವುದರೊಂದಿಗೆ ಪೆವಿಲಿಯನ್ ಸೇರಿದರು.
3 ಓವರ್‌ಗಳಲ್ಲಿ 1 ಮೇಡನ್‌ನೊಂದಿಗೆ 12ಕ್ಕೆ 2 ವಿಕೆಟ್ ಉಡಾಯಿಸಿದ ಉನದ್ಕಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶಾರ್ದೂಲ್ ಠಾಕೂರ್(19ಕ್ಕೆ 3), ಆ್ಯಡಮ್ ಝಂಪಾ(22ಕ್ಕೆ 2) ಮತ್ತು ಡೇನಿಯಲ್ ಕ್ರಿಸ್ಟಿಯನ್(10ಕ್ಕೆ 2) ಸಂಘಟಿತ ದಾಳಿ ನಡೆಸಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ್ನು ಬೇಗನೆ ಕಟ್ಟಿ ಹಾಕಿದರು. ಉನದ್ಕಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಂಜಾಬ್ ತಂಡದ ಪರ ಅಕ್ಷರ್ ಪಟೇಲ್ 22 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್. ವಿಕೆಟ್ ಕೀಪರ್ ವೃದ್ದಿಮಾನ್ ಸಹಾ(13), ಶಾನ್ ಮಾರ್ಷ್(10), ಸ್ವಪ್ನಿಲ್ ಸಿಂಗ್(10) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.