ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಸುಮಿತ್‌ಗೆ ಬೆಳ್ಳಿ, ಭಾರತಕ್ಕೆ ಒಟ್ಟು 10 ಪದಕ
ಹೊಸದಿಲ್ಲಿ, ಮೇ 14: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ರವಿವಾರ 125 ಕೆ.ಜಿ. ತೂಕ ವಿಭಾಗದಲ್ಲಿ ಸುಮಿತ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಭಾರತ ಒಟ್ಟು 10 ಪದಕಗಳನ್ನು ಬಾಚಿಕೊಂಡಿದೆ.
ಪುರುಷರ 125 ಕೆಜಿ ತೂಕದ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸುಮಿತ್ ಅವರು ಇರಾನ್‌ನ ಯಾದುಲ್ಲಾ ಮುಹಮ್ಮದ್ ಕಾಸಿಮ್ ಮೊಹೆಬಿ ವಿರುದ್ಧ ಶರಣಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಭಾರತ ಒಂದು ಚಿನ್ನ, ಐದು ಬೆಳ್ಳಿ ಹಾಗೂ ನಾಲ್ಕು ಕಂಚು ಸಹಿತ ಒಟ್ಟು 10 ಪದಕಗಳನ್ನು ಜಯಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ಕಳೆದ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 9 ಪದಕಗಳನ್ನು ಜಯಿಸಿತ್ತು.
ಚಿನ್ನದ ಪದಕ ಸುತ್ತಿನಲ್ಲಿ ಭಾರತದ ಕುಸ್ತಿಪಟು ಸುಮಿತ್ ಇರಾನ್‌ನ ಬಲಿಷ್ಠ ಎದುರಾಳಿ ಮೊಹೆಬಿಗೆ ಪ್ರತಿರೋಧ ಒಡ್ಡಲು ವಿಫಲವಾಗಿ 2-6 ಅಂತರದಿಂದ ಸೋಲುನುಭವಿಸಿ ಬೆಳ್ಳಿಪದಕ ಗೆದ್ದುಕೊಂಡರು.
ಇದಕ್ಕೆ ಮೊದಲು ನಡೆದಿದ್ದ ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಸುತ್ತಿನಲ್ಲಿ ಎದುರಾಳಿಯನ್ನು ಸುಲಭವಾಗಿ ಮಣಿಸಿದ ಸುಮಿತ್ ಫೈನಲ್‌ಗೆ ಪ್ರವೇಶಿಸಿದರು. ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಸುಮಿತ್ ಜಪಾನ್‌ನ ಟೈಕಿ ಯಮಮೊಟೊರನ್ನು 6-3 ಅಂತರದಿಂದ ಮಣಿಸಿದರು. ಸೆಮಿ ಫೈನಲ್‌ನಲ್ಲಿ ಫರ್ಖೊಡ್ ಅನುಕುಲೊವ್‌ರನ್ನು 7-2 ಅಂತರದಿಂದ ಸೋಲಿಸಿ ಚಿನ್ನದ ಪದಕ ಸುತ್ತಿಗೆ ತೇರ್ಗಡೆಯಾದರು.
ಇಂದು ಸ್ಪರ್ಧೆಯಲ್ಲಿದ್ದ ಭಾರತ ಫೀಸ್ಟ್ರೈಲ್ ಕುಸ್ತಿಪಟುಗಳಾದ ಹರ್ಫೂಲ್(61ಕೆಜಿ), ವಿನೋದ್ ಕುಮಾರ್ ಓಂಪ್ರಕಾಶ್(70ಕೆಜಿ) ಹಾಗೂ ಸೋಮ್‌ವೀರ್(86ಕೆಜಿ) ಆರಂಭಿಕ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು.
ಹರ್ಫೂಲ್ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಜಪಾನ್‌ನ ರೀ ಹಿಗುಚಿ ವಿರುದ್ಧ 6-7 ರಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ. ಪುರುಷರ 70 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ವಿನೋದ್‌ಕುಮಾರ್ ಓಂಪ್ರಕಾಶ್ ಅವರು ಜಪಾನ್‌ನ ಮೊಮೊಜಿರೊ ನಕಮುರಾ ವಿರುದ್ಧ 11-0 ಅಂತರದಿಂದ ಸೋತಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಕೊರಿಯದ ಗ್ವಾನುಕ್ ಕಿಮ್ ವಿರುದ್ಧ 0-11 ರಿಂದ ಸೋತಿರುವ ಸೋಮ್‌ವೀರ್ ಟೂರ್ನಿಯಿಂದ ಹೊರ ನಡೆದಿದ್ದಾರೆ.