ಯೋಗಿ ಜೊತೆಗೇ ಬಂದು ಹೋಯಿತು ಎಸಿ, ಸೋಫಾ...!

Update: 2017-05-14 18:01 GMT

 ಲಕ್ನೊ, ಮೇ 14: ಪಾಕಿಸ್ತಾನದ ಗಡಿ ಕಾರ್ಯಪಡೆಯಿಂದ ಶಿರಚ್ಛೇದನಗೊಂಡಿದ್ದ ಇಬ್ಬರು ಯೋಧರಲ್ಲಿ ಓರ್ವರಾದ ಪ್ರೇಮ್ ಸಾಗರ್ ಕುಟುಂಬದವರು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಮನೆಗೆ ಭೇಟಿ ನೀಡಲಿದ್ದಾರೆ ಎಂಬ ಖುಷಿಯಲ್ಲಿದ್ದರು. ಅದರಂತೆಯೇ ಸ್ಥಳೀಯಾಡಳಿತ ಈ ಯೋಧನ ಮನೆಯಲ್ಲಿ ಹಲವು ಐಷಾರಾಮಿ ಸವಲತ್ತುಗಳನ್ನು ಸಿದ್ದಗೊಳಿಸಿತು. ಮನೆಗೆ ನಿರಂತರ ವಿದ್ಯುತ್ ಸೌಕರ್ಯದ ವ್ಯವಸ್ಥೆ, ಏರ್‌ಕಂಡಿಷನಿಂಗ್ ವ್ಯವಸ್ಥೆ, ಸೋಫಾ ಮುಂತಾದ ಸೌಕರ್ಯದಿಂದ ಮನೆಯನ್ನು ಸಜ್ಜುಗೊಳಿಸಲಾಯಿತು. ಅಲ್ಲದೆ ಮನೆಯವರಿಗೆ ಮುಖ್ಯಮಂತ್ರಿ ಸಾಂತ್ವನ ಹೇಳಲು ಸಜ್ಜುಗೊಳಿಸಿದ್ದ ಕೋಣೆಯ ನೆಲಕ್ಕೆ ರತ್ನಗಂಬಳಿಯನ್ನೂ ಹಾಸಲಾಯಿತು.

 ನಿಗದಿ ಪಡಿಸಿದಂತೆ ಹುತಾತ್ಮ ಯೋಧ ಪ್ರೇಮ್‌ಸಾಗರ್ ಮನೆಗೆ ಯೋಗಿ ಭೇಟಿ ನೀಡಿದರು. ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ತೆರಳಿದರು. ಅವರ ಕಾರು ಕಣ್ಮರೆಯಾಗುವ ಮೊದಲೇ ಮನೆಗಾಗಮಿಸಿದ ಸ್ಥಳೀಯಾಡಳಿತದ ಅಧಿಕಾರಿಗಳು ಏರ್‌ಕಂಡಿಷನರ್, ಸೋಫಾ, ರತ್ನಗಂಬಳಿ.. ಹೀಗೆ ಯಾವುದನ್ನೂ ಬಿಡದೆ ಕಿತ್ತೊಯ್ದರು.

 ಇದು ತಮಗೆ ಮಾಡಿದ ಅವಮಾನ. ಕನಿಷ್ಟ ಒಂದು ದಿನವಾದರೂ ಅವರು ಕಾಯಬಹುದಿತ್ತು ಎಂದು ಹುತಾತ್ಮ ಯೋಧನ ಸಹೋದರ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News