ಮಗನ ಸ್ವಾತಂತ್ರ್ಯಕ್ಕಾಗಿ ಚರಂಡಿ ನೀರು ಕುಡಿದು ಬದುಕಿದ ತಾಯಿ

Update: 2017-05-14 18:08 GMT

ಆಗ್ರಾ, ಮೇ 14: ಬಡ್ಡಿಗೆ ಹಣ ನೀಡಿದ್ದವನ ವಶದಲ್ಲಿದ್ದ ತನ್ನ ಮಗನನ್ನು ಬಿಡುಗಡೆಗೊಳಿಸುವ ಸಲುವಾಗಿ ಕೆಲಸ ಅರಸಿ ಆಗ್ರಾಕ್ಕೆ ಬಂದ ಮಹಿಳೆಯೋರ್ವರು ಕೈಯಲ್ಲಿ ಚಿಕ್ಕಾಸೂ ಇಲ್ಲದೆ ಚರಂಡಿಯ ನೀರನ್ನು ಕುಡಿದು ಬದುಕುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ತನ್ನ ಪತಿಯ ಅಂತ್ಯಕ್ರಿಯೆಗಾಗಿ ರೀಟಾ ಎಂಬಾಕೆ ಬಡ್ಡಿ ಸಾಲನೀಡುವವನಿಂದ 2,000 ರೂ. ಸಾಲ ಪಡೆದಿದ್ದರು. ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸುವವರೆಗೆ ಆಕೆಯ ಏಳು ವರ್ಷದ ಪುತ್ರನನ್ನು ಆತ ತನ್ನ ಬಳಿ ಇರಿಸಿದ್ದ. ಅಂತ್ಯಕ್ರಿಯೆ ಮುಗಿದು ಮಗನನ್ನು ಬಿಡುಗಡೆಗೊಳಿಸುವ ಸಲುವಾಗಿ ರೀಟಾ ನಾಗಾಲ್ಯಾಂಡ್ ನ ದಿಮಾಪುರ್ ನಿಂದ ಕೆಲಸ ಅರಸಿ ಆಗ್ರಾಕ್ಕೆ ಬಂದಿದ್ದರು.

ಆದರೆ ಇಲ್ಲಿಯ ಪರಿಸ್ಥಿತಿ ಬೇರೆಯದೇ ಆಗಿತ್ತು. ರೀಟಾಗೆ ಯಾವುದೇ ಕೆಲಸ ಲಭಿಸದೆ ಅವರು ಬೀದಿಬದಿಯಲ್ಲೇ ತನ್ನ ಮೂರು ಹಾಗೂ ಎರಡು ವರ್ಷದ ಮಕ್ಕಳೊಂದಿಗೆ ಮಲಗಿದ್ದರು. ಕಸದ ಬುಟ್ಟಿಗೆಸೆದ ಆಹಾರಗಳನ್ನು ಸೇವಿಸಿ, ಕೊನೆಗೆ ನೀರೂ ಲಭಿಸದ ಕಾರಣ ಚರಂಡಿ ನೀರನ್ನೇ ಕುಡಿದು ಅವರು ದಿನದೂಡಿದ್ದರು. ಶಾ ಮಾರುಕಟ್ಟೆ ಸಮೀಪ ರೀಟಾ ಚರಂಡಿ ನೀರನ್ನು ಕುಡಿದು ಮಕ್ಕಳಿಗೂ ಅದೇ ನೀರನ್ನು ನೀಡುತ್ತಿರುವುದನ್ನು ಕಂಡ ಸಾಮಾಜಿಕ ಕಾರ್ಯಕರ್ತ ನರೇಶ್ ಪರಾಸ್ ರೀಟಾರನ್ನು ಮಾತನಾಡಿಸಲು ಮುಂದಾದರು. ಆದರೆ ಆಕೆ ಭಾಷೆ ಅರ್ಥವಾಗದ ಕಾರಣ ಸ್ಥಳಿಯ ಪೊಲೀಸರು ಹಾಗೂ ಸಂಸ್ಥೆಯೊಂದನ್ನು ಅವರು ಸಂಪರ್ಕಿಸಿದರು.

ತನ್ನ ಸಂಬಂಧಿಯೊಂದಿಗೆ 2,000 ಕಿ.ಮೀ.ದೂರದ ಆಗ್ರಾಕ್ಕೆ ಉದ್ಯೋಗ ಹುಡುಕುವ ಸಲುವಾಗಿ ಆಗಮಿಸಿದ್ದೆ. 7 ತಿಂಗಳ ಹಿಂದೆ ತನ್ನ ಪತಿ ಮೃತಪಟ್ಟಿದ್ದು,. ಅಂತ್ಯಕ್ರಿಯೆಗಾಗಿ ವ್ಯಕ್ತಿಯೊಬ್ಬನಿಂದ ಹಣ ಪಡೆದಿದ್ದೆ. ಬದಲಾಗಿ ತನ್ನ ಏಳು ವರ್ಷದ ಪುತ್ರನನ್ನು ಆತನ ಬಳಿಯಿರಿಸಿಕೊಂಡಿದ್ದ. ತನ್ನ ಊರಿನಲ್ಲೇ ಚಹಾ ಗಾರ್ಡನ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ ಅಲ್ಲಿ ದಿನವೊಂದಕ್ಕೆ 40 ರೂ. ಮಾತ್ರ ದುಡಿಯಲು ಸಾಧ್ಯವಾಗುತ್ತಿತ್ತು. ಮಗನನ್ನು ರಕ್ಷಿಸಲು ಈ ಹಣದಿಂದ ಸಾಧ್ಯವಾಗದು ಎಂದೆನಿಸಿ ಆಗ್ರಾಕ್ಕೆ ಕೆಲಸ ಹುಡುಕಿಕೊಂಡು ಬಂದೆ. ಜೊತೆಗೆ ಬಂದಿದ್ದ ಸಂಬಂಧಿ ನಾಪತ್ತೆಯಾಗಿದ್ದಾನೆ ಎಂದು ರೀಟಾ ತಮ್ಮ ಕಥೆಯನ್ನು ವಿವರಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಪರಾಸ್ ಕೊಹಿಮಾದ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ. ರೀಟಾ ಊರಿಗೆ ಮರಳಿದರೆ ಅವರಿಗೆ ನೆರವಾಗುವುದಾಗಿ ಅಧಿಕಾರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಶಾ ಮಾರುಕಟ್ಟೆಯ ಕೆಲ ವರ್ತಕರು ಆಕೆಗೆ ಬಟ್ಟೆ, ಪಾದರಕ್ಷೆ ಹಾಗೂ ಆಹಾರ ನೀಡಿದ್ದಲ್ಲದೆ, 3.500 ರೂ. ಒಟ್ಟುಗೂಡಿಸಿ ನೀಡಿ ಮಾನವೀಯತೆ ಮೆರೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News