×
Ad

ಭಾರೀ ತೂಕದ ಇಸ್ರೋ ರಾಕೆಟ್ ಜೂನ್‌ನಲ್ಲಿ ನಭಕ್ಕೆ

Update: 2017-05-14 23:54 IST

ಚೆನ್ನೈ, ಮೇ 14: ದಕ್ಷಿಣ ಏಶ್ಯಾ ಉಪಗ್ರಹ ಉಡ್ಡಯನ ಕಾರ್ಯದಲ್ಲಿ ದೊರಕಿದ ಯಸಸ್ಸಿನಿಂದ ಉತ್ತೇಜನಗೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ), ಇದೀಗ 640 ಟನ್ ಭಾರದ ಜಿಎಸ್‌ಎಲ್‌ವಿ - ಮಾರ್ಕ್ 3 ರಾಕೆಟ್‌ನ ಚೊಚ್ಚಲ ಉಡ್ಡಯನಕ್ಕೆ ಸಿದ್ಧತೆ ಆರಂಭಿಸಿದೆ.

 ಈ ರಾಕೆಟ್‌ನ ಪ್ರಮುಖ ಮತ್ತು ಬೃಹತ್ ಕ್ರಯೋಜೆನಿಕ್ ಇಂಜಿನ್ ಅನ್ನು ಚೆನ್ನೈಯಲ್ಲಿ ಅಂತರಿಕ್ಷ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವುದು ಗಮನಾರ್ಹವಾಗಿದೆ. ನಮ್ಮ 12 ವರ್ಷಗಳ ಶ್ರಮಕ್ಕೆ ಪ್ರತಿಫಲ ದೊರಕುವ ಸಮಯ ಇದೀಗ ಬಂದಿದೆ. ಜೂನ್‌ನಲ್ಲಿ ಸಂಪರ್ಕ ಉಪಗ್ರಹ ಜಿಎಸ್‌ಎಟಿ-19 ಹೊತ್ತ ಎಸ್‌ಎಲ್‌ವಿ - ಮಾರ್ಕ್ 3 ರಾಕೆಟ್‌ನ ಚೊಚ್ಚಲ ಉಡ್ಡಯನ ಶ್ರೀಹರಿಕೋಟದಲ್ಲಿ ನಡೆಯಲಿದ್ದು ಇದಕ್ಕೆ ಸರ್ವ ಸಿದ್ಧತೆ ನಡೆಯುತ್ತಿದೆ. ಈ ಉದ್ದೇಶಿತ ಕಾರ್ಯಯೋಜನೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಎಲ್ಲಾ ಅಧಿಕಾರಿಗಳಲ್ಲಿದೆ ಎಂದು ವಿಕ್ರಮ್ ಸಾರಾಭಾ ಅಂತರಿಕ್ಷ ಕೇಂದ್ರ(ವಿಎಸ್‌ಎಸ್‌ಸಿ)ದ ನಿರ್ದೇಶಕ ಕೆ.ಸಿವನ್ ತಿಳಿಸಿದ್ದಾರೆ. ರಾಕೆಟ್ ಉಡ್ಡಯನಕ್ಕೂ ಮೊದಲು ವಿಸ್ತೃತ ಪರೀಕ್ಷೆಗಳನ್ನು ನಡೆಸಲಾಗಿದೆ. ಇದು ಹೊಸ ರಾಕೆಟ್ ಆಗಿರುವ ಕಾರಣ ವಿಸ್ತೃತ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ. ಜೂನ್ ಮೊದಲ ವಾರದಲ್ಲಿ ಈ ರಾಕೆಟ್ ತನ್ನ ಚೊಚ್ಚಲ ಅಂತರಿಕ್ಷ ಯಾನ ನಡೆಸಲಿದೆ ಎಂದವರು ತಿಳಿಸಿದರು. ಜಿಎಸ್‌ಎಟಿ 19 ಉಪಗ್ರಹವು ಸುಮಾರು 3.2 ಟನ್ ತೂಕವಿದ್ದು ಭಾರತೀಯ ರಾಕೆಟೊಂದು ಅಂತರಿಕ್ಷಕ್ಕೆ ಹೊತ್ತೊಯ್ಯುವ ಅತ್ಯಧಿಕ ತೂಕದ ಉಪಗ್ರಹ ಎನಿಸಲಿದೆ. ನಾಲ್ಕು ಟನ್‌ಗಳಷ್ಟು ತೂಕದ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಈ ರಾಕೆಟ್‌ಗೆ ಇದೆ. ಬಹೂಪಯೋಗಿಯಾಗಿರುವ ಈ ರಾಕೆಟ್‌ನ ಜೀವಿತಾವಧಿ 15 ವರ್ಷಗಳಾಗಿವೆ.
 ಇನ್ನೂ ಕೆಲವು ಜಿಎಸ್‌ಎಲ್‌ವಿ-ಮಾರ್ಕ್ 3 ರಾಕೆಟ್ ನಿರ್ಮಿಸಲು ಸರಕಾರ ಇಸ್ರೋಗೆ ಅನುಮತಿ ನೀಡಿದ್ದು ಇದಕ್ಕೆ ಅಗತ್ಯವಾಗಿರುವ ‘ಹಾರ್ಡ್‌ವೇರ್’ ಉತ್ಪನ್ನಗಳಿಗೆ ವ್ಯಾಪಾರಾದೇಶ (ಆರ್ಡರ್) ನೀಡಲಾಗಿದೆ ಎಂದು ‘ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್(ಎಲ್‌ಪಿಎಸ್‌ಸಿ) ನಿರ್ದೇಶಕ ಎಸ್.ಸೋಮನಾಥ್ ತಿಳಿಸಿದ್ದಾರೆ.
 ಭಾರತದ ಬಳಿ ಈಗ ಪೋಲಾರ್ ಸೆಟಿಲೈಟ್ ಲಾಂಚ್ ವೆಹಿಕಲ್ ಮತ್ತು ಜಿಎಸ್‌ಎಲ್‌ವಿ-ಮಾರ್ಕ್ 2 - ಎಂಬ ಎರಡು ರಾಕೆಟ್‌ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News