ಹಸಿವಾಯಿತೆಂದು ಈ ಪೈಲಟ್ ಮಾಡಿದ್ದೇನು ಗೊತ್ತೇ?

Update: 2017-05-15 08:44 GMT

ಹೊಸದಿಲ್ಲಿ, ಮೇ 15: ಹಸಿವು ಕಾಡಿದಾಗ ಹಲವರು ಫಾಸ್ಟ್ ಫುಡ್ ಅಂಗಡಿಗಳತ್ತ ಧಾವಿಸಿ ತಮಗಿಷ್ಟವಾದ ತಿನಿಸನ್ನು ಆರ್ಡರ್ ಮಾಡಿ ಪಡೆದುಕೊಳ್ಳುತ್ತಾರೆ. ಈ ಹೆಲಿಕಾಪ್ಟರ್ ನ ಪೈಲಟ್ ಕೂಡ ಅದನ್ನೇ ಮಾಡಿದ್ದ. ಆದರೆ ಹೇಗೆ ಮಾಡಿದ ಅನ್ನೋ ವಿಷಯವೇ ಬಹಳಷ್ಟು ಸುದ್ದಿಯಾಗುತ್ತಿದೆ.

ಮೊಬೈಲ್ ಫೋನ್ ಕ್ಯಾಮರಾವೊಂದರಲ್ಲಿ ಸೆರೆಹಿಡಿಯಲಾದ ವಿಡಿಯೋವೊಂದರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಸಮೀಪ ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ನಿಂದ ಇಳಿದ ಅದರ ಪೈಲಟ್ ನೇರವಾಗಿ ರೆಸ್ಟಾರೆಂಟ್ ಗೆ ತೆರಳಿ ಅಲ್ಲಿಂದ ಕಂದು ಬಣ್ಣದ ಪ್ಯಾಕೆಟನ್ನು ಕೈಯ್ಯಲ್ಲಿ ಹಿಡಿದುಕೊಂಡು ಹೆಲಿಕಾಪ್ಟರ್ ನತ್ತ ತೆರಳಿ ನಂತರ ತನ್ನ ಸೆಲ್ ಫೋನಿನಲ್ಲಿ ಫೋಟೋ ತೆಗೆದು ಹೆಲಿಕಾಪ್ಟರ್ ಹತ್ತಿ ಅಲ್ಲಿಂದ ತೆರಳುತ್ತಿರುವುದು ದಾಖಲಾಗಿದೆ.

ಆಸ್ಟ್ರೇಲಿಯಾದ ನಾಗರಿಕ ವಿಮಾನಯಾನ ಸುರಕ್ಷತಾ ಪ್ರಾಧಿಕಾರದ ಪ್ರಕಾರ ಈ ರೀತಿಯಾಗಿ ಹೆಲಿಕಾಪ್ಟರುಗಳನ್ನು ಖಾಸಗಿ ಭೂಮಿಗಳಲ್ಲಿ ಭೂಸ್ಪರ್ಶ ಮಾಡುವುದು ತಾಂತ್ರಿಕವಾಗಿ ತಪ್ಪಲ್ಲದೇ ಇದ್ದರೂ ಆ ಜಾಗದ ಮಾಲಕರ ಅನುಮತಿ ಪಡೆದಿದ್ದರೆ ಏನೂ ತೊಂದರೆಯಿಲ್ಲ ಎಂದು ಹೇಳಿದೆ.

ಆ ಪೈಲಟ್ ಯಾರೆಂದು ತಿಳಿದು ಬಂದಿಲ್ಲವಾದರೂ ಆಸ್ಟ್ರೇಲಿಯಾ ರೇಡಿಯೋ ಜತೆ ಮಾತನಾಡಿದ ವ್ಯಕ್ತಿಯೊಬ್ಬ ತಾನೇ ಈ ಪೈಲಟ್ ಎಂದು ಹೇಳಿಕೊಂಡಿದ್ದಾನಲ್ಲದೆ ಆ ಸ್ಥಳದಲ್ಲಿ ಹೆಲಿಕಾಪ್ಟರ್ ಇಳಿಸಲು ಅನುಮತಿ ಪಡೆದಿದ್ದೇನೆ ಎಂದು ವಾದಿಸಿದ್ದಾನೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News