ವಿವಾಹ ಅಸಿಂಧುಗೊಳ್ಳುವರೆಗೂ ಪತಿಯು ಪತ್ನಿಗೆ ನಿರ್ವಹಣಾ ವೆಚ್ಚ ನೀಡಬೇಕು: ದಿಲ್ಲಿ ಕೋರ್ಟ್
ಹೊಸದಿಲ್ಲಿ, ಮೇ 15: ತನ್ನ ವಿವಾಹ ಅಸಿಂಧುಗೊಂಡ ಆದೇಶವು ಪತಿಗೆ ದೊರೆಯುವವರೆಗೂ ವಿವಾಹಿತ ಮಹಿಳೆಯು ಗೃಹ ಹಿಂಸೆ ತಡೆ ಕಾನೂನಿನಡಿ ರಕ್ಷಣೆ ಹಾಗೂ ಸವಲತ್ತುಗಳನ್ನು ಪಡೆಯುವ ಹಕ್ಕು ಹೊಂದಿದ್ದಾಳೆಂದು ದಿಲ್ಲಿಯ ನ್ಯಾಯಾಲಯವೊಂದು ಸೋಮವಾರ ತಿಳಿಸಿದೆ.
ತನ್ನ ಪರಿತ್ಯಕ್ತ ಪತ್ನಿಗೆ 5 ಸಾವಿರ ರೂ. ನಿರ್ವಹಣಾ ವೆಚ್ಚ ನೀಡಬೇಕೆಂಬ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಅರ್ಜಿದಾರನಿಗೆ ಸೆಶನ್ಸ್ ನ್ಯಾಯಾಲಯ ಈ ವಿಷಯವನ್ನು ಸ್ಪಷ್ಟಪಡಿಸಿದೆ. ತನ್ನ ಪತ್ನಿಯು ತಾನು ಮದುವೆಯಾಗುವ ಮೊದಲೇ ಇನ್ನೊಬ್ಬನನ್ನು ವಿವಾಹವಾಗಿರುವುದರಿಂದ ಆಕೆಯೊಂದಿಗನ ತನ್ನ ದಾಂಪತ್ಯವು ಅಸಿಂಧುವಾಗಿದೆ. ಹೀಗಾಗಿ ಆಕೆಗೆ ನಿರ್ವಹಣಾ ವೆಚ್ಚವನ್ನು ನೀಡುವ ಅಗತ್ಯವಿಲ್ಲವೆಂದು ಅರ್ಜಿದಾರ ವಾದವಾಗಿತ್ತು.
ಇದಕ್ಕೆ ಉತ್ತರಿಸಿದ ಸೆಶನ್ಸ್ ನ್ಯಾಯಾಲಯವು ಒಂದು ವೇಳೆ ವಾದದ ದೃಷ್ಟಿಯಿಂದ ಇದನ್ನು ಒಪ್ಪಿಕೊಂಡರೂ, ಮಹಿಳೆಯು ಮೊದಲು ಸೋದರ ಸಂಬಂಧಿಯನ್ನು ವಿವಾಹವಾಗಿದ್ದರಿಂದ, ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ಆ ವಿವಾಹವು ಅಸಿಂಧುವಾಗಿದೆಯೆಂದು ಪ್ರತಿಪಾದಿಸಿದೆ.