ಚೀನಾ: ಲಕ್ಷಾಂತರ ಕಂಪ್ಯೂಟರ್‌ಗಳಿಗೆ ಸೋಂಕು

Update: 2017-05-15 15:01 GMT

ಬೀಜಿಂಗ್, ಮೇ 15: ಸರಕಾರಿ ಇಲಾಖೆಗಳು ಸೇರಿದಂತೆ ಚೀನಾದ ಸುಮಾರು 30,000 ಸಂಸ್ಥೆಗಳ ಲಕ್ಷಾಂತರ ಕಂಪ್ಯೂಟರ್‌ಗಳು ಜಾಗತಿಕ ‘ರ್ಯಾನ್ಸಮ್‌ವೇರ್’ (ಒತ್ತೆಹಣ ವೈರಸ್) ದಾಳಿಗೆ ತುತ್ತಾಗಿವೆ ಎಂದು ಚೀನಾದ ಪ್ರಮುಖ ಸುರಕ್ಷಾ-ಸಾಫ್ಟ್‌ವೇರ್ ಪೂರೈಕೆದಾರ ಸಂಸ್ಥೆ ಹೇಳಿದೆ.

ಸರಕಾರಿ ಕಚೇರಿಗಳು, ವಿಶ್ವವಿದ್ಯಾನಿಲಯಗಳು, ಎಟಿಎಂಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಚೀನಾದ 29,372 ಸಂಸ್ಥೆಗಳು ಶನಿವಾರ ರಾತ್ರಿಯ ವೇಳೆಗೆ ಈ ಒತ್ತೆಹಣ ವೈರಸ್ ದಾಳಿಗೆ ಗುರಿಯಾಗಿವೆ ಎಂದು ‘ಕಿಹೂ360’ ಕಂಪೆನಿಯ ಎಂಟರ್‌ಪ್ರೈಸ್ ಸೆಕ್ಯುರಿಟಿ ವಿಭಾಗ ಹೇಳಿದೆ.

ಈ ಸುಲಿಗೆ ವೈರಸ್ ಇನ್ನು ಯಾವ ರೂಪ ಪಡೆದುಕೊಳ್ಳಬಹುದು ಎಂಬುದರ ಮೇಲೆ ಜಗತ್ತಿನಾದ್ಯಂತದ ಸರಕಾರಗಳು, ಕಂಪೆನಿಗಳು ಮತ್ತು ಕಂಪ್ಯೂಟರ್ ಪರಿಣತರು ಸೋಮವಾರ ನಿಗಾ ಇಟ್ಟಿದ್ದಾರೆ.

ಈಗಾಗಲೇ 150ಕ್ಕೂ ಅಧಿಕ ದೇಶಗಳ ಕಂಪ್ಯೂಟರ್ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿರುವ ವೈರಸ್, ಬ್ಯಾಂಕ್‌ಗಳು, ಆಸ್ಪತ್ರೆಗಳು ಮತ್ತು ಸರಕಾರಿ ಕಚೇರಿಗಳ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡಿದೆ. ಜಗತ್ತಿನ ಇತರೆಡೆಗೆ ಹೋಲಿಸಿದರೆ ಈ ವೈರಸ್ ಏಶ್ಯಾದ ಮೇಲೆ ಬೀರಿರುವ ಪರಿಣಾಮ ಕಡಿಮೆ.

ಹಳೆಯ ಮೈಕ್ರೊಸಾಫ್ಟ್ ಕಂಪ್ಯೂಟರ್‌ಗಳ ಆಪರೇಟಿಂಗ್ ಸಿಸ್ಟಮ್‌ಗಳ ದೌರ್ಬಲ್ಯಗಳನ್ನು ಗುರಿಯಾಗಿಸಿರುವ ಈ ವೈರಸ್ ದಾಳಿ ಶುಕ್ರವಾರ ಆರಂಭವಾಗಿದೆ.

ಸೈಬರ್ ದಾಳಿಯಿಂದ ತಪ್ಪಿಸಲು ಏನು ಮಾಡಬೇಕು?
ಜಾಗತಿಕ ಇಂಟರ್‌ನೆಟ್ ವಲಯದಲ್ಲಿ ಬಿರುಗಾಳಿಯೆಬ್ಬಿಸಿರುವ ಸೈಬರ್ ದಾಳಿ ಸೋಮವಾರವೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಮುನ್ನುಗ್ಗಿದೆ. ಕಂಪ್ಯೂಟರ್ ಪ್ರೋಗ್ರಾಂಗಳಿಗೆ ಪ್ರವೇಶವನ್ನು ನಿರಾಕರಿಸಿರುವ ಕನ್ನಗಾರರು, ಸಮಸ್ಯೆಯನ್ನು ಪರಿಹರಿಸಲು ಹಣದ ಬೇಡಿಕೆಯಿಡುತ್ತಿದ್ದಾರೆ. ಹಾಗಾಗಿ ಈ ತಂತ್ರಗಾರಿಕೆಯನ್ನು ‘ರ್ಯಾನ್ಸಮ್‌ವೇರ್’ (ಒತ್ತೆಹಣ ವೈರಸ್) ಎಂಬುದಾಗಿ ಕರೆಯಲಾಗುತ್ತಿದೆ.

ಕನ್ನಗಾರರ ‘ಸುಲಿಗೆ ಯೋಜನೆ’ಯು 150ಕ್ಕೂ ಹೆಚ್ಚಿನ ದೇಶಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದೆ ಹಾಗೂ ಅದರ ವಿವಿಧ ಮಾದರಿಗಳು ಪ್ರತಿ ದಿನ ಹೊರಬರುತ್ತಿದ್ದು ಪರಿಸ್ಥಿತಿ ಕಠಿಣವಾಗುತ್ತಾ ಸಾಗುತ್ತಿದೆ.

‘ವಾನ್ನಾಕ್ರೈ’ ಅಥವಾ ‘ವಾನ್ನಾಕ್ರಿಪ್ಟ್’ ಎಂಬ ಆರಂಭಿಕ ಕಳ್ಳ ಸಾಫ್ಟ್‌ವೇರ್ ಬ್ರಿಟನ್ ಆಸ್ಪತ್ರೆ ಜಾಲ, ಜರ್ಮನಿಯ ನ್ಯಾಶನಲ್ ರೈಲ್ವೆ ಮತ್ತು ಜಗತ್ತಿನಾದ್ಯಂತದ ಇತರ ಹಲವಾರು ಕಂಪೆನಿಗಳು ಮತ್ತು ಸರಕಾರಿ ಇಲಾಖೆಗಳ ಕಂಪ್ಯೂಟರ್‌ಗಳಿಗೆ ಸೋಂಕು ಹಬ್ಬಿಸಿದೆ.

ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ‘ವಾನ್ನಾಕ್ರೈ’ ದಾಳಿಯನ್ನು ತಡೆಯಬಹುದಾಗಿದೆ.
1) ವಿಂಡೋಸ್ ಕಂಪ್ಯೂಟರ್‌ಗಳಿಗೆ ಮೈಕ್ರೊಸಾಫ್ಟ್ ಸೆಕ್ಯುರಿಟಿ ಬುಲೆಟಿನ್ ಎಂಎಸ್17-010 ಶಿಫಾರಸು ಮಾಡಿರುವ ಪ್ಯಾಚ್‌ಗಳನ್ನು ಅನ್ವಯಿಸಬೇಕು.

2) ಆ್ಯಂಟಿವೈರಸ್ ಸಾಫ್ಟ್‌ವೇರನ್ನು ನವೀಕರಿಸಿ.

3) ಮಹತ್ವದ ಫೈಲ್‌ಗಳ ಆಫ್‌ಲೈನ್ ಮಾಹಿತಿಕೋಶವನ್ನು ನಿರ್ಮಿಸಿ ಹಾಗೂ ಅದನ್ನು ನವೀಕರಿಸುತ್ತಿರಿ.

4) ಎಂಟರ್‌ಪ್ರೈಸ್ ಎಜ್ ಅಥವಾ ಪೆರಿಮೀಟರ್ ನೆಟ್‌ವರ್ಕ್ ಡಿವೈಸ್‌ಗಳ ಮೂಲಕ ಇಂಟರ್‌ನೆಟನ್ನು ಸಂಪರ್ಕಿಸುವ ಸಂಸ್ಥೆಗಳು ತಮ್ಮ ಎಸ್‌ಎಂಬಿ ಪೋರ್ಟ್‌ಗಳನ್ನು ಬ್ಲಾಕ್ ಮಾಡಬೇಕು ಅಥವಾ ಎಸ್‌ಎಂಬಿವಿ1ನ್ನು ಡಿಸೇಬಲ್ ಮಾಡಬೇಕು.

5) ವಿಂಡೋಸ್ ಎಕ್ಸ್‌ಪಿ, ವಿಸ್ತಾ, ಸರ್ವರ್ 2008 ಮತ್ತು ಸರ್ವರ್ 2003 ಮುಂತಾದ ಹಳೆಯ ವಿಂಡೋಸ್ ಸಿಸ್ಟಮ್‌ಗಳ ಬಳಕೆದಾರರು ಮತ್ತು ಅಡ್ಮಿನಿಸ್ಟ್ರೇಟರ್‌ಗಳು ಹೊಸ ಸಿಸ್ಟಮ್‌ಗಳನ್ನು ಅಳವಡಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News