×
Ad

ಆರ್‌ಸಿಬಿಯಿಂದ ಸಾಂಘಿಕ ವೈಫಲ್ಯ

Update: 2017-05-15 22:55 IST

ಹೊಸದಿಲ್ಲಿ, ಮೇ 15: ಕಳೆದ ವರ್ಷದ ಐಪಿಎಲ್‌ನಲ್ಲಿ ರನ್ನರ್ಸ್‌-ಅಪ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷ ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿದೆ. ಈ ವರ್ಷ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಆಡಿದ್ದ ಆರ್‌ಸಿಬಿ ತಂಡ ಕ್ರಿಸ್ ಗೇಲ್, ಎಬಿಡಿವಿಲಿಯರ್ಸ್, ಶೇನ್ ವ್ಯಾಟ್ಸನ್, ಯುಜ್ವೇಂದ್ರ ಚಾಹಲ್ ಹಗೂ ನಾಯಕ ವಿರಾಟ್ ಕೊಹ್ಲಿ ಅವರ ಸಾಮೂಹಿಕ ವೈಫಲ್ಯದಿಂದ ದಯನೀಯ ಸೋಲನುಭವಿಸಿದೆ.

 ಗೇಲ್(77)ಹಾಗೂ ಕೊಹ್ಲಿ(64) ಮೊದಲ ವಿಕೆಟ್‌ಗೆ ಸೇರಿಸಿದ್ದ 122 ರನ್ ಜೊತೆಯಾಟದ ನೆರವಿನಿಂದ ಗುಜರಾತ್ ಲಯನ್ಸ್ ವಿರುದ್ಧ 213 ರನ್ ಗಳಿಸಿದ್ದ ಆರ್‌ಸಿಬಿ 21 ರನ್‌ಗಳಿಂದ ಜಯ ಸಾಧಿಸಿತ್ತು. ಆದರೆ ಇದೇ ಪ್ರದರ್ಶನ ಮುಂದುವರಿಸಲು ವಿಫಲವಾಯಿತು. ಕೋಲ್ಕತಾದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್‌ನಲ್ಲಿ ಅತ್ಯಂತ ಕನಿಷ್ಠ ಸ್ಕೋರ್(49 ರನ್‌ಗೆ ಆಲೌಟ್) ಗಳಿಸಿತ್ತು. ಆರ್‌ಸಿಬಿಯ ಯಾವೊಬ್ಬ ಬ್ಯಾಟ್ಸ್‌ಮನ್ ಎರಡಂಕೆ ಸ್ಕೋರ್ ದಾಖಲಿಸಲಿಲ್ಲ.

ಕೊಹ್ಲಿ ಅನುಪಸ್ಥಿತಿಯಲ್ಲಿ ಐಪಿಎಲ್‌ನ ಮೊದಲ 3 ಪಂದ್ಯಗಳಲ್ಲಿ ಆರ್‌ಸಿಬಿಯ ನಾಯಕತ್ವವಹಿಸಿದ್ದ ವ್ಯಾಟ್ಸನ್ 2ರಲ್ಲಿ ಸೋಲನುಭವಿಸಿದ್ದರು. ಕೊಹ್ಲಿ ವಾಪಸಾದರೂ ಆರ್‌ಸಿಬಿ ಉತ್ತಮ ಫಲಿತಾಂಶ ದಾಖಲಿಸಲಿಲ್ಲ. 10 ಇನಿಂಗ್ಸ್‌ಗಳಲ್ಲಿ 308 ರನ್ ಗಳಿಸಿದ್ದ ಕೊಹ್ಲಿ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

ಈ ವರ್ಷದ ಐಪಿಎಲ್‌ನಲ್ಲಿ 1 ಕೋ.ರೂ.ಗೆ ಖರೀದಿಸಲ್ಪಟ್ಟ ಆಲ್‌ರೌಂಡರ್ ಪವನ್ ನೇಗಿ ತಂಡದ ಪರ ಗರಿಷ್ಠ ವಿಕೆಟ್(16) ಪಡೆದರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ನೇಗಿ ಒಟ್ಟು 144 ರನ್ ಗಳಿಸಿದ್ದರು.

  ಟೂರ್ನಿಯಲ್ಲಿ ಗೇಲ್ ಹಾಗೂ ವ್ಯಾಟ್ಸನ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ವ್ಯಾಟ್ಸನ್ ಪಾಲಿಗೆ ಈ ವರ್ಷದ ಐಪಿಎಲ್ ಅತ್ಯಂತ ಕೆಟ್ಟದ್ದಾಗಿತ್ತು. ಗೇಲ್ 9 ಪಂದ್ಯಗಳಲ್ಲಿ ಏಕೈಕ ಅರ್ಧಶತಕ ಬಾರಿಸಿದ್ದರು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ನಿರ್ಮಿಸಿದ್ದರು. 2016ರಲ್ಲಿ ಆರ್‌ಸಿಬಿ ಫೈನಲ್‌ಗೆ ತಲುಪಲು ಬೌಲಿಂಗ್‌ನಲ್ಲಿ ದೊಡ್ಡ ಕೊಡುಗೆ ನೀಡಿದ್ದ ವ್ಯಾಟ್ಸನ್ ಈ ಬಾರಿ 8 ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಪಡೆದಿದ್ದರು. ಬ್ಯಾಟಿಂಗ್‌ನಲ್ಲಿ 6 ಇನಿಂಗ್ಸ್‌ಗಳಲ್ಲಿ ಕೇವಲ 71 ರನ್ ಗಳಿಸಿದ್ದರು.

12 ಕೋ.ರೂ.ಗೆ ಖರೀದಿಸಲ್ಪಟ್ಟಿದ್ದ ಇಂಗ್ಲೆಂಡ್‌ನ ವೇಗದ ಬೌಲರ್ ಟೈಮಲ್ ಮಿಲ್ಸ್ 5 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿ ಭಾರೀ ನಿರಾಸೆಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News