ಶಂಕಿತ ಪಾಕ್ ನುಸುಳುಕೋರಳ ಹತ್ಯೆ
Update: 2017-05-15 23:28 IST
ಗುರುದಾಸ್‌ಪುರ, ಮೇ 15: ಪಂಜಾಬ್‌ನ ಗಡಿಜಿಲ್ಲೆ ಗುರುದಾಸ್‌ಪುರದಲ್ಲಿ ಪಾಕಿಸ್ತಾನದ ಗಡಿ ದಾಟಿ ಭಾರತದೊಳಗೆ ನುಸುಳುವ ಯತ್ನ ನಡೆಸಿದ ಶಂಕೆಯಲ್ಲಿ ಮಹಿಳೆಯೋರ್ವಳನ್ನು ಗಡಿಭದ್ರತಾ ಪಡೆ ಗುಂಡಿಟ್ಟು ಸಾಯಿಸಿದೆ.
ಬಾರಿಯಲ್ ಸೇನಾ ನೆಲೆಯ ಬಳಿ ಗಡಿಬೇಲಿಯಾಚೆಗೆ ಓರ್ವ ವ್ಯಕ್ತಿಯ ಚಲನವಲನವನ್ನು ಬಿಎಸ್‌ಎಫ್ ಯೋಧರು ಪತ್ತೆಹಚ್ಚಿ ಎಚ್ಚರಿಕೆ ನೀಡಲಾಯಿತು. ಆದರೂ ಭಾರತದ ಭೂಪ್ರದೇಶದೊಳಗೆ ಈ ವ್ಯಕ್ತಿ ಮುನ್ನುಗ್ಗಿ ಬಂದಾಗ ಗುಂಡಿಟ್ಟು ಹತ್ಯೆ ಮಾಡಲಾಯಿತು. ಅತಿಕ್ರಮಿ 60 ವರ್ಷದ ಮಹಿಳೆ ಎಂಬುದು ಆ ಬಳಿಕ ತಿಳಿದುಬಂದಿತು ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ. ಯಾವುದೇ ಮಹತ್ವದ ವಸ್ತುಗಳನ್ನು ಈಕೆ ಹೊಂದಿರಲಿಲ್ಲ. ಘಟನೆಯ ಬಳಿಕ ಪಾಕ್ ಗಡಿಭದ್ರತಾ ಪಡೆಯ ಜೊತೆ ಧ್ವಜಸಭೆ ನಡೆಸಿ ಮೃತ ಮಹಿಳೆಯ ಫೋಟೊಗಳನ್ನು ಹಸ್ತಾಂತರಿಸಲಾಯಿತು. ಮಹಿಳೆಯ ಗುರುತು ಪತ್ತೆಗಾಗಿ ಪಾಕ್ ಪಡೆಯ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.