×
Ad

ನಕ್ಸಲ್ ಗುಂಡಿಗೆ ಎಸ್‌ಟಿಎಫ್ ಯೋಧ ಬಲಿ

Update: 2017-05-15 23:29 IST

ರಾಯ್‌ಪುರ, ಮೇ 15: ಛತ್ತೀಸ್‌ಗಡದ ಬಿಜಾಪುರ್ ಜಿಲ್ಲೆಯಲ್ಲಿ ರವಿವಾರ ಸಂಜೆ ಮಾವೊವಾದಿಗಳ ವಿರುದ್ಧ ನಡೆದ ಎನ್‌ಕೌಂಟರ್ ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ಯ ಯೋಧನೊಬ್ಬ ಸೋಮವಾರ ಮೃತಪಟ್ಟಿದ್ದಾನೆ.

ಎಸ್‌ಟಿಎಫ್ ಕಾನ್‌ಸ್ಟೇಬಲ್ ಶಲಭ್ ಉಪಾಧ್ಯಾಯ್ ಎಂಬಾತನನ್ನು ಚಿಕಿತ್ಸೆಗಾಗಿ ಮುಂಜಾನೆ ಬಸಗುಡಾ ಎಂಬಲ್ಲಿಗೆ ಹೆಲಿಕಾಪ್ಟರ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ಆತ ಕೊನೆಯುಸಿ ರೆಳೆದಿರುವುದಾಗಿ ದಾಂತೆವಾಡ ಪ್ರಾಂತದ ಉಪ ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿ. ತಿಳಿಸಿದ್ದಾರೆ.
ಬಿಜಾಪುರ್‌ನ ಬಸಗುಡಾ ಸಮೀಪದ ದಟ್ಟಾರಣ್ಯವೊಂದರಲ್ಲಿ ರವಿವಾರ ಸಂಜೆ ಭದ್ರತಾಪಡೆಗಳ ಜಂಟಿ ತಂಡ ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಶಲಭ್ ಉಪಾಧ್ಯಾಯ್‌ಗೆ ಗುಂಡೇಟಿನಿಂದ ತೀವ್ರ ಗಾಯಗಳಾಗಿದ್ದವು. ಘರ್ಷಣೆ ನಡೆದ ಸ್ಥಳದಿಂದ ಗಾಯಾಳು ಯೋಧನನ್ನು ಮುಂಜಾನೆಯ ವೇಳೆ ಹೆಲಿಕಾಪ್ಟರ್‌ನಲ್ಲಿ ಕೊಂಡೊಯ್ಯಲಾಯಿತು. ಆದರೆ ದಾರಿ ಮಧ್ಯೆ ಆತ ಅಸುನೀಗಿದನೆಂದು ಅವರು ಹೇಳಿದ್ದಾರೆ. ಮೃತ ಯೋಧನು ಉತ್ತರಪ್ರದೇಶದ ಭದೋಯಿ ಜಿಲ್ಲೆಯ ನಿವಾಸಿಯೆಂದು ತಿಳಿದುಬಂದಿದೆ.
ಬಿಜಾಪುರ್‌ನ ಬಸಗುಡಾ ಹಾಗೂ ಅವಪಲ್ಲಿ ಪ್ರದೇಶಗಳಲ್ಲಿ ಮಾವೋವಾದಿಗಳ ಅಡಗುದಾಣಗಳ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಜಿಲ್ಲಾ ಮೀಸಲು ದಳ (ಡಿಆರ್‌ಜಿ), ಕೋಬ್ರಾ ಪಡೆ ಹಾಗೂ ಜಿಲ್ಲಾ ಪೊಲೀಸ್ ತಂಡ ಆ ಪ್ರದೇಶಗಳಲ್ಲಿ ಮೇ 3ರಿಂದ ಕಾರ್ಯಾಚರಣೆಯನ್ನು ನಡೆಸುತ್ತಿದ್ದವು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News