ದೇವರ ಇಚ್ಛೆಯಿದ್ದರೆ ರಾಜಕೀಯ ಪ್ರವೇಶ: ರಜನಿಕಾಂತ್
ಚೆನ್ನೈ, ಮೇ 15: ರಾಜಕೀಯ ಪ್ರವೇಶಿಸುವ ಸಾಧ್ಯತೆಯನ್ನು ತಳ್ಳಿಹಾಕದ ತಮಿಳು ಸಿನೆಮಾ ರಂಗದ ಸೂಪರ್‌ಸ್ಟಾರ್ ರಜನಿಕಾಂತ್, ದೇವರ ಇಚ್ಛೆ ಇದ್ದರೆ ಮುಂದೊಂದು ದಿನ ರಾಜಕೀಯ ಕ್ಷೇತ್ರ ಪ್ರವೇಶಿಸಲೂಬಹುದು ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ. ನಾವು ಏನನ್ನು ಮಾಡಬೇಕು ಎಂಬುದನ್ನು ಜೀವನದ ಪ್ರತಿಯೊಂದು ಘಟ್ಟದಲ್ಲೂ ದೇವರು ನಿರ್ಧರಿಸುತ್ತಾನೆ. ಈ ಹಂತದಲ್ಲಿ ನಾನು ನಟನಾಗಬೇಕು ಎಂದು ದೇವರು ನಿರ್ಧರಿಸಿದ್ದಾನೆ. ನಾನು ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ದೇವರು ಬಯಸಿದರೆ ನಾನು ನಾಳೆ ರಾಜಕೀಯ ಕ್ಷೇತ್ರ ಪ್ರವೇಶಿಸಲೂಬಹುದು. ಒಂದು ವೇಳೆ ರಾಜಕೀಯ ಕ್ಷೇತ್ರ ಪ್ರವೇಶಿಸಿದರೆ ನಾನು ಸತ್ಯದ ಪರ ಇರುತ್ತೇನೆ ಮತ್ತು ಹಣ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶಿಸುವವರನ್ನು ಸಹಿಸು ವುದಿಲ್ಲ. ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು 66ರ ಹರೆಯದ ರಜನಿಕಾಂತ್ ಹೇಳಿದ್ದಾರೆ. ತಮ್ಮ ಅಭಿ ಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
1996ರ ವಿಧಾನಸಭೆ ಚುನಾವಣೆಯಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆಗೆ ಬೆಂಬಲ ಸೂಚಿಸಿದ್ದು ಒಂದು ಅನಿರೀಕ್ಷಿತ ರಾಜಕೀಯ ಘಟನೆಯಾಗಿತ್ತು ಎಂದು ವ್ಯಾಖ್ಯಾನಿಸಿದ ಅವರು, ರಾಜಕೀ ಯ ಪಕ್ಷವೊಂದನ್ನು ಬೆಂಬಲಿಸಿದ್ದು ನನ್ನ ಕಡೆ ಯಿಂದ ಆದ ಪ್ರಮಾದವಾಗಿತ್ತು. ನನ್ನ ಹೆಸ ರನ್ನು ಬಹಳಷ್ಟು ರಾಜಕಾರಣಿಗಳು ದುರು ಪಯೋಗಪಡಿಸಿಕೊಂಡರು ಮತ್ತು ಅವ ರಲ್ಲಿ ಕೆಲವರು ನನ್ನ ಹೆಸರು ಬಳಸಿ ಹಣ ವನ್ನೂ ಸಂಪಾದಿಸಿದರು. ಈಗ ಯಾವುದೇ ರಾಜಕೀಯ ಪಕ್ಷಕ್ಕೆ ನನ್ನ ಬೆಂಬಲವಿಲ್ಲ ಎಂದರು.
ಈ ತಿಂಗಳ ಆರಂಭದಲ್ಲಿ ರಜನಿಕಾಂತ್ ಸಿನೆಮಾ ನಟಿ ಮತ್ತು ಕಾಂಗ್ರೆಸ್ ಸದಸ್ಯೆ ನಗ್ಮಾ ಅವರನ್ನು ಭೇಟಿಮಾಡಿದ್ದು ರಜನಿ ರಾಜಕೀಯ ಪ್ರವೇಶದ ಬಗ್ಗೆ ಇದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. 2014ರ ಮಹಾಚುನಾವಣೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಚೆನ್ನೈಯಲ್ಲಿ ರಜನಿಕಾಂತರನ್ನು ಭೇಟಿಯಾಗಿದ್ದರು. ಇದೊಂದು ಸೌಹಾರ್ದ ಭೇಟಿ ಎಂದು ತಿಳಿಸಲಾಗಿತ್ತಾದರೂ ಈ ಘಟನೆ ರಜನಿ ರಾಜಕೀಯ ಪ್ರವೇಶದ ಊಹಾಪೋಹಕ್ಕೆ ಮತ್ತಷ್ಟು ಗ್ರಾಸ ಒದಗಿಸಿತ್ತು.