×
Ad

ಆದಿತ್ಯನಾಥ್ ನೇಮಕ ರದ್ದುಗೊಳಿಸಲು ಕೋರಿ ಅರ್ಜಿ

Update: 2017-05-16 12:00 IST

ಹೊಸದಿಲ್ಲಿ, ಮೇ16: ಲೋಕಸಭಾ ಸದಸ್ಯರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಉಪ ಮುಖ್ಯ ಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್‌‌ನ ಲಕ್ನೋ ವಿಭಾಗೀಯ ಪೀಠ ಇಂದು ಭಾರತದ ಅಟಾರ್ನ್‌ ಜನರಲ್ ಗೆ ನೋಟೀಸ್‌ ಜಾರಿ ಮಾಡಿದೆ.

ಸಂಜಯ್ ಶರ್ಮ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧಿಸಿ ನ್ಯಾಯಮೂರ್ತಿ ಸುಧೀರ್ ಅಗರ‍್ ವಾಲ್ ಮತ್ತು ನ್ಯಾಯಮೂರ್ತಿ ವೀರೇಂದ್ರ  ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ನೋಟಿಸ್‌ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಮೇ 24ಕ್ಕೆ ನಿಗದಿಪಡಿಸಿದೆ.
ಲೋಕಸಭಾ ಸದಸ್ಯರಾಗಿರುವವರು ರಾಜ್ಯ ಸರಕಾರದ  ಸಚಿವರಾಗುವಂತಿಲ್ಲ.  

ಭಾರತದ ಸಂವಿಧಾನದ 101(2) ವಿಧಿಯನ್ನು ಉಲ್ಲಂಘಿಸಿ ಲೋಕಸಭಾ ಸದಸ್ಯರಾಗಿರುವ  ಆದಿತ್ಯನಾಥ್ ಮತ್ತು ಕೇಶವ ಪ್ರಸಾದ್‌ ಮೌರ್ಯ  ಕ್ರಮವಾಗಿ ಮುಖ್ಯ ಮಂತ್ರಿ ಮತ್ತು ಉಪಮುಖ್ಯ ಮಂತ್ರಿಯಾಗಿದ್ದಾರೆ. ಉತ್ತರ ಪ್ರದೇಶದ ಮುಖ್ಯ ಮಂತ್ರಿ ಹಾಗೂ ಉಪಮುಖ್ಯ ಮಂತ್ರಿಯಾಗಿದ್ದರೂ ,  ಇನ್ನೂ ಅವರು ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಕೇಶವ ಪ್ರಸಾದ್‌ ಮೌರ್ಯ ಉಪ ಮುಖ್ಯ ಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ಅವರು ಆಯ್ಕೆಯಾಗಿದ್ದ ಲೋಕಸಭಾ ಕ್ಷೇತ್ರಗಳು  ತೆರವಾಗಿರುವುದಾಗಿ ಘೋಷಿಸುವಂತೆ ಅರ್ಜಿದಾರ ಸಂಜಯ್ ಶರ್ಮ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ  ಮತ್ತು ಕೇಶವ ಪ್ರಸಾದ್‌ ಮೌರ್ಯ ಉಪ ಮುಖ್ಯ ಮಂತ್ರಿಯಾಗಿ ಮಾ.19ರಂದು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದರು. ರಾಷ್ಟ್ರಪತಿ ಚುನಾವಣೆ ಮುಗಿದ ಬಳಿಕ ಇಬ್ಬರು ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.  

ಶಾಸಕರಲ್ಲದವರು ಒಂದು ವೇಳೆ ರಾಜ್ಯ ಸರಕಾರದ ಸಚಿವರಾದರೆ ನಿಯಮ ಪ್ರಕಾರ ಅವರು ಆರು ತಿಂಗಳೊಳಗಾಗಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಬೇಕಿದೆ. ಇದೀಗ  ಆದಿತ್ಯನಾಥ್ ಮತ್ತು ಕೇಶವ ಪ್ರಸಾದ್‌ ಮೌರ್ಯ ವಿಧಾನಸಭೆಗೆ ಸ್ಪರ್ಧಿಸಲು ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News