ತ್ರಿವಳಿ ತಲಾಕ್ ಕಳೆದ 1,400ವರ್ಷಗಳಿಂದ ವಿಶ್ವಾಸದ ವಿಚಾರ : ಎಐಎಂಪಿಎಲ್‌ಬಿ
ಹೊಸದಿಲ್ಲಿ, ಮೇ 16: ತ್ರಿವಳಿ ತಲಾಕ್ ಕಳೆದ 1,400 ವರ್ಷಗಳಿಂದ ಮುಸ್ಲಿಮರಿಗೆ ವಿಶ್ವಾಸದ ವಿಚಾರವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಇಂದು ತಿಳಿಸಿರುವ ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್ ಬಿ) ಕೇಂದ್ರ ಸರಕಾರದ ನಿಲುವನ್ನು ಪ್ರಶ್ನಿಸಿದೆ.
"ತ್ರಿಪಲ್ ತಲಾಕ್ ಇಸ್ಲಾಂನಲ್ಲಿ ಕ್ರಿಸ್ತ ಶಕ 637 ವರ್ಷಗಳಿಂದ ಜಾರಿಯಲ್ಲಿದೆ.1,400 ವರ್ಷಗಳಿಂದಲೂ ಇದು ನಂಬಿಕೆಯ ವಿಚಾರವಾಗಿದೆ. ಇದು ಇಸ್ಲಾಮಿಕ್ ಆಚರಣೆಯಲ್ಲ ಎಂದು ಹೇಳಲು ನಾವ್ಯಾರು? . ಆದ ಕಾರಣ ಇಲ್ಲಿ ಸಂವಿಧಾನಾತ್ಮಕ ನೈತಿಕತೆ ಮತ್ತು ನ್ಯಾಯದ ಪ್ರಶ್ನೆ ಉದ್ಬವಿಸುವುದಿಲ್ಲ” ಎಂದು ಎಐಎಂಪಿಎಲ್ ಬಿ ಪರ ಹಿರಿಯ ವಕೀಲರಾದ ಕಪಿಲ್ ಸಿಬಾಲ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
" ಭಗವಾನ್ ಶ್ರೀರಾಮ ಆಯೋಧ್ಯೆಯಲ್ಲಿ ಹುಟ್ಟಿದ ಎಂದು ನಾವು ನಂಬಿದ್ದೇವೆ. ಇದು ನಂಬಿಕೆಯ ವಿಚಾರವಾಗಿದೆ. ಸಾಂವಿಧಾನಿಕ ನೈತಿಕತೆಯನ್ನು ಈ ವಿಚಾರದಲ್ಲಿ ಪ್ರಶ್ನಿಸುವಂತಿಲ್ಲ. ಅದೇ ರೀತಿ ತ್ರಿವಳಿ ತಲಾಕ್ ನಲ್ಲಿ ಮುಸ್ಲಿಂರು ನಂಬಿಕೆ ಇಟ್ಟು ಅನುಸರಿಸಿಕೊಂಡು ಬರುತ್ತಿದ್ದಾರೆ”ಎಂದು ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹಾರ್ ನೇತೃತ್ವದ ಸುಪ್ರೀಂಕೋರ್ಟ್‌ನ ಪಂಚ ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ಸಿಬಾಲ್ ವಾದಿಸಿದರು.
"ನಿಖಾ ನಾಮದ ಮೂಲಕ ವಯಸ್ಕರ ಒಪ್ಪಿಗೆಯ ಮೇರೆಗೆ ಮುಸ್ಲಿಂ ಮದುವೆ ಒಪ್ಪಂದವಾಗುತ್ತದೆ. ಹಾಗೆಯೇ ವಿಚ್ಛೇದನವೂ ಸಹ. ಮುಸ್ಲಿಂರಲ್ಲಿ ವಿವಾಹ ಹಾಗೂ ವಿಚ್ಛೇದನ ಎರದೂ ಒಪ್ಪಂದಗಳಾದ ಮೇಲೆ ಬೇರೆಯವರಿಗೇಕೆ ಸಮಸ್ಯೆ ಇರಬೇಕು ಎಂದು ಎಐಎಂಪಿಎಲ್ ಬಿ ಪ್ರಶ್ನಿಸಿದೆ. ಪ್ರವಾದಿ ಮುಹಮ್ಮದ್(ಸ.ಅ) ಅವರ ಕಾಲಾವಧಿ ನಂತರ ತ್ರಿವಳಿ ತಲಾಖ್ ನಿಯಮ ಜಾರಿಗೆ ಬಂತು ಎಂಬ ವಿವರ ಹದೀಸ್ ನಲ್ಲಿ ಉಲ್ಲೇಖವಿದೆ ಎಂದು ಎಐಎಂಪಿಎಲ್ ಬಿ ಪರ ವಾದ ಮಂಡಿಸಿರುವ ಕಪಿಲ್ ಸಿಬಲ್ ಹೇಳಿದರು.