ಸೃಜನಶೀಲ ಯುವಜನತೆಗೆ ಇಲ್ಲಿವೆ ಹೊಸ ಹೊಸ ಆಯ್ಕೆಗಳು

Update: 2017-05-17 04:45 GMT

ಭಾರತೀಯರಾಗಿ ನಮ್ಮ ವೃತ್ತಿಜೀವನ ಕುರಿತು ಮಡಿವಂತಿಕೆ ನಮ್ಮಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಅದೊಂದು ಕಾಲವಿತ್ತು, ಪ್ರತಿ ತಂದೆ-ತಾಯಿಯೂ ತಮ್ಮ ಮಕ್ಕಳು ಇಂಜಿನಿಯರ್,ವೈದ್ಯ,ಲೆಕ್ಕ ಪರಿಶೋಧಕ ಅಥವಾ ಎಂಬಿಎ ಆಗಬೇಕೆಂದು ಬಯಸುತ್ತಿದ್ದರು. ಈಗ ಹೆಚ್ಚಿನ ಪೋಷಕರು ತಮ್ಮ ಅಭಿರುಚಿಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಕ್ಕಳನ್ನು ಉತ್ತೇಜಿಸುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಕಚೇರಿಯಲ್ಲಿ ದುಡಿಯುವ ಏಕತಾನತೆಯನ್ನು ಬಯಸದ ಸೃಜನಶೀಲರು ನೀವಾಗಿದ್ದರೆ ನಿಮಗೆ ಖುಷಿ ಕೊಡಬಹುದಾದ ಏಳು ವೃತ್ತಿಜೀವನದ ಆಯ್ಕೆಗಳು ಇಲ್ಲಿವೆ.

►ಬ್ಯಾಚುಲರ್ ಆಫ್ ರೂರಲ್ ಸ್ಟಡೀಸ್

ಗ್ರಾಮಗಳ ಬಗ್ಗೆ ನಿಮಗೆ ಆಸಕ್ತಿಯಿದ್ದರೆ ಮತ್ತು ಪ್ರವಾಸಿಯಂತೆ ಗ್ರಾಮಗಳಿಗೆ ತೆರಳಿ ಫೋಟೊಗಳನ್ನು ಕ್ಲಿಕ್ಕಿಸುವುದಕ್ಕಿಂತ ಹೆಚ್ಚಿನದನ್ನು ಮಾಡಲು ನೀವು ಬಯಸಿದ್ದರೆ ಈ ಕೋರ್ಸ್ ನಿಮಗೆ ಹೇಳಿ ಮಾಡಿಸಿದಂತಿದೆ. ವಿವಿಧ ಗ್ರಾಮೀಣ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಈ ಕೋರ್ಸ್ ನಿಮಗೆ ಅವಕಾಶಗಳನ್ನು ಒದಗಿಸುತ್ತದೆ. ಪಶು ಸಂಗೋಪನೆ, ಅರಣ್ಯಶಾಸ್ತ್ರ, ಕೃಷಿ ವ್ಯವಸ್ಥಾಪನೆ, ಮಕ್ಕಳ ಅಭಿವೃದ್ಧಿ, ಪರಿಸರ ವ್ಯವಸ್ಥಾಪನೆ, ಸಮುದಾಯ ಅಭಿವೃಧ್ಧಿ ಇತ್ಯಾದಿಗಳನ್ನು ಈ ಕೋರ್ಸ್ ಒಳಗೊಂಡಿದೆ.

►ಎಥಿಕಲ್ ಹ್ಯಾಕಿಂಗ್

 ಮೋಜಿಗಾಗಿ ಸ್ನೇಹಿತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡುವವರು, ಪಾಸ್‌ವರ್ಡ್‌ಗಳನ್ನು ಭೇದಿಸುವಲ್ಲಿ ನಿಪುಣರಾಗಿರುವವರು, ಲಾಕ್ ಆಗಿರುವ ಸಿಸ್ಟಮ್‌ಗಳನ್ನು ತೆರೆಯುವ ಸಾಮರ್ಥ್ಯವುಳ್ಳವರು ಮತ್ತು ತಮ್ಮ ಹೆಚ್ಚಿನ ಸಮಯವನ್ನು ವಿವಿಧ ಕೋಡ್‌ಗಳೊಂದಿಗೆ ಪ್ರಯೋಗದಲ್ಲಿ ವ್ಯಯಿಸುವರಿಗೆ ತಮ್ಮ ಅದ್ಭುತ ಕೌಶಲವನ್ನು ಒಳ್ಳೆಯ ಕಾರಣಕ್ಕಾಗಿ ಬಳಸಲು ಅತ್ಯುತ್ತಮ ಅವಕಾಶಗಳಿವೆ. ಎಥಿಕಲ್ ಹ್ಯಾಕರ್ ಆಗುವ ಮೂಲಕ ಕಂಪ್ಯೂಟರ್ ಸಿಸ್ಟಮ್‌ಗಳ ಭದ್ರತೆಯನ್ನು ಭೇದಿಸಿದರೆ ಅದಕ್ಕೆ ಕೈತುಂಬ ದುಡ್ಡು ನಿಮಗೆ ಸಿಗುತ್ತದೆ.

►ಫೋಟೊಗ್ರಫಿ

ಒಂದು ಕಾಲದಲ್ಲಿ ಕೇವಲ ಹವ್ಯಾಸವಾಗಿ ಪರಿಣಿಸಲ್ಪಟ್ಟಿದ್ದ ಛಾಯಾಚಿತ್ರಣ ಕಲೆ ಇಂದು ಆಕರ್ಷಕ ಆದಾಯ ತಂದುಕೊಡುವ ವೃತ್ತಿಯಾಗಿ ಬದಲಾಗಿದೆ. ಕಲೆಯ ಒಂದು ರೂಪವೆಂದು ಭಾವಿಸಲಾ ಗಿದ್ದ, ತನ್ನದೇ ಆದ ಮಿತಿಗಳನ್ನು ಹೊಂದಿದ್ದ ಛಾಯಾ ಚಿತ್ರಗ್ರಹಣ ತಂತ್ರಜ್ಞಾನ ಕ್ರಾಂತಿಯೊಂದಿಗೆ ತನಗೆ ಬಲವಾದ ಬುನಾದಿಯನ್ನು ನಿರ್ಮಿಸಿಕೊಂಡಿದೆ. ಚಲನಚಿತ್ರಗಳು, ಟಿವಿ,ಕಾರ್ಯಕ್ರಮಗಳ ಛಾಯಾ ಚಿತ್ರಗ್ರಹಣ ಇವೆಲ್ಲ ಇಂದು ಪ್ರತಿಯೊಂದೂ ಪ್ರಮುಖ ಕ್ಷೇತ್ರದ ಮುಖ್ಯ ಅಂಗಗಳಾಗಿವೆ.

►ಫಾರೆನ್ಸಿಕ್ ಸೈನ್ಸ್

ಫಾರೆನ್ಸಿಕ್ ಸೈನ್ಸ್ ಅಥವಾ ವಿಧಿವಿಜ್ಞಾನ ತಜ್ಞರು ಅಪರಾಧ ಸ್ಥಳದಲ್ಲಿ ಲಭ್ಯ ಭೌತಿಕ ಸಾಕ್ಷಾಧಾರಗಳು ಮತ್ತು ಇತರ ಸುಳಿವುಗಳನ್ನು ಸಂಗ್ರಹಿಸಿ, ಅವುಗಳನ್ನು ಪರಿಶೀಲನೆಗೆ ಒಳಪಡಿಸುವ ಮೂಲಕ ಅಪರಾಧ ಪ್ರಕರಣ ಗಳನ್ನು ಭೇದಿಸುವಲ್ಲಿ ನೆರವಾಗುತ್ತಾರೆ. ಸುಳ್ಳು ಪತ್ತೆ, ಮಂಪರು ಪರೀಕ್ಷೆ, ಡಿಎನ್‌ಎ ಟೈಪಿಂಗ್ ಮತ್ತು ಸೈಬರ್ ಅಪರಾಧ ಇವು ಪಠ್ಯಕ್ರಮದಲ್ಲಿ ಒಳಗೊಂಡಿವೆ.

ಸಾಮಾನ್ಯವಾಗಿ ವೈದ್ಯಕೀಯ ಕಾಲೇಜುಗಳಲ್ಲಿ ಕಲಿಸಲಾಗುವ ಫಾರೆನ್ಸಿಕ್ ಮೆಡಿಸಿನ್ ಸಹ ಇದರಲ್ಲಿ ಸೇರಿದೆ. ಪದವಿಯ ಬಳಿಕ ಸ್ನಾತಕೋತ್ತರ ಪದವಿಯನ್ನೂ ವಿದ್ಯಾರ್ಥಿಗಳು ಮಾಡಬಹುದಾ ಗಿದ್ದು, ರಾಜ್ಯ ಮತ್ತು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಗಳು, ಬೆರಳಚ್ಚು ಘಟಕಗಳು ಮತ್ತು ಗುಪ್ತಚರ ಸಂಸ್ಥೆಗಳಲ್ಲಿ ವಿಜ್ಞಾನಿಗಳಾಗಿ ಉದ್ಯೋಗಗಳು ಲಭ್ಯವಿರುತ್ತವೆ.

►ಎರೋಸ್ಪೇಸ್ ಇಂಜಿನಿಯರಿಂಗ್

ಎರೋಸ್ಪೇಸ್ ಇಂಜಿನಿಯರಿಂಗ್ ಅತ್ಯಂತ ಬೇಡಿಕೆಯ ಮತ್ತು ಆಸಕ್ತಿಪೂರ್ಣ ವೃತ್ತಿಜೀವನ ಆಯ್ಕೆಯಾಗಿದೆ. ಹೆಚ್ಚುತಿರುವ ವಿಮಾನ ಯಾನದ ಜನಪ್ರಿಯತೆ ಮತ್ತು ಬಾಹ್ಯಾಕಾಶ ಅನ್ವೇಷಣೆಗೆ ವಿನ್ಯಾಸ ರೂಪಿಸುವಲ್ಲಿ ನೈಪುಣ್ಯ ಮತ್ತು ಹೆಚ್ಚೆಚ್ಚು ಸುಧಾರಣೆಗಳು ಅಗತ್ಯವಾಗಿವೆ. ಇವೆರಡೂ ಕ್ಷೇತ್ರಗಳು ಅಭಿವೃದ್ಧಿಗೊಳ್ಳುತ್ತಿರುವ ವೇಗವನ್ನು ಗಮನಿಸಿದರೆ ಸದ್ಯೋಭವಿಷ್ಯದಲ್ಲಿ ಏರೋಸ್ಪೇಸ್ ಇಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚಲಿದೆ.

ಎರೋಸ್ಪೇಸ್ ಇಂಜಿನಿಯರಿಂಗ್‌ನ್ನು ಎರೋನಾಟಿಕಲ್ ಇಂಜಿನಿಯರಿಂಗ್ ಮತ್ತು ಆ್ಯಸ್ಟ್ರೋನಾಟಿಕಲ್ ಇಂಜಿನಿಯರಿಂಗ್ ಎಂದು ವರ್ಗೀಕರಿಸಲಾಗಿದೆ. ಎರೋನಾಟಿಕಲ್ ಇಂಜಿನಿಯರಿಂಗ್ ವಿಮಾನಗಳು, ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ಹಾಗೂ ಆ್ಯಸ್ಟ್ರೋನಾಟಿಕಲ್ ಇಂಜಿನಿಯರಿಂಗ್ ಬಾಹ್ಯಾಕಾಶ ನೌಕೆಗಳು, ರಾಕೆಟ್ ಗಳು ಮತ್ತು ಬಾಹ್ಯಾಕಾಶ ನಿಲ್ದಾಣಗಳಿಗೆ ಸಂಂಬಂಧಿಸಿದೆ.

►ಕಂಟೆಂಟ್ ರೈಟಿಂಗ್

ನಿಮ್ಮ ಬರವಣಿಗೆ ಮತ್ತು ವಿಶ್ಲೇಷಣಾ ಕೌಶಲಗಳಿಂದ ಮಾಹಿತಿ ಮತ್ತು ಜ್ಞಾನದ ಬೇಡಿಕೆಯನ್ನು ನೀವು ಪೂರೈಸಬಲ್ಲವರಾಗಿದ್ದರೆ ಇಂದು ಸರ್ವವ್ಯಾಪಿಯಾಗಿರುವ ಇಂಟರ್ನೆಟ್ ನಿಮ್ಮ ಪಾಲಿಗೆ ಚಿನ್ನದ ಗಣಿಯಾಗಬಹುದು. ಕಂಟೆಂಟ್ ರೈಟಿಂಗ್ ಅಥವಾ ವಿಷಯ ಲೇಖನವು ನಿಮಗೆ ನಿರಂತರ ಅವಕಾಶಗಳನ್ನು ಒದಗಿಸುವ ಜೊತೆಗೆ ಹೊಸಹೊಸ ಸವಾಲುಗಳನ್ನು ನೀಡುತ್ತದೆ. ಕಂಟೆಂಟ್ ರೈಟರ್‌ಗಳಿಗೆ ಸದಾ ಬೇಡಿಕೆಯಿದೆ. ಆದರೆ ಅಂತರ್ಜಾಲದ ವ್ಯಾಪ್ತಿ ಹಿಗ್ಗುವುದರೊಂದಿ ಗೆ ಅತ್ಯುತ್ತಮ ಕಂಟೆಂಟ್ ರೈಟರ್‌ಗಳಿಗೆ ಬೇಡಿಕೆಯೂ ಬಹುಪಾಲು ಹೆಚ್ಚುತ್ತಿದೆ.

ಈ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಕೊಳ್ಳಬಸುವವರಿಗೆ ವೆಬ್ ಲೇಖನಗಳು, ಬ್ಲಾಗ್ ಪೋಸ್ಟ್‌ಗಳು, ಜಾಹೀರಾತು ಕಾಪಿ, ಪತ್ರಿಕೋ ದ್ಯಮ, ತಾಂತ್ರಿಕ ಬರವಣಿಗೆ ಮತ್ತು ಇ-ಪುಸ್ತಕಗಳಿಂದ ಹಿಡಿದು ಫೇಸ್‌ಬುಕ್,ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳಿಗೆ ವಿಷಯದವರೆಗೆ ಸಾಕಷ್ಟು ಅವಕಾಶಗಳು ಕಾದು ಕುಳಿತಿವೆ.

►ಡಿಸೈನ್

 ಡಿಸೈನ್ ಅಥವಾ ವಿನ್ಯಾಸ ನಾವು ಧರಿಸುವ ಶೂ,ನಾವು ಬಳಸುವ ಕಂಪ್ಯೂಟರ್‌ನಿಂದ ಹಿಡಿದು ನಾವು ಪ್ರತಿದಿನ ನೋಡುವ ಕಚೇರಿ ಕಟ್ಟಡಗಳವರೆಗೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದನ್ನೂ ಅಕ್ಷರಶಃ ಆವರಿಸಿಕೊಂಡಿದೆ. ನೀವು ರಚನಾತ್ಮಕ ಮನಸ್ಸು ಹೊಂದಿದ್ದರೆ ಮತ್ತು ವಿನ್ಯಾಸಗಳನ್ನು ರೂಪಿಸುವಲ್ಲಿನ ಜಟಿಲತೆ ಮತ್ತು ಅದರಲ್ಲಿನ ಸೌಂದರ್ಯಶಾಸ್ತ್ರ ನಿಮಗೆ ಖುಷಿಯನ್ನು ನೀಡುತ್ತದೆ ಎಂದಾದರೆ ಬ್ಯಾಚುಲರ್ ಆಫ್ ಡಿಸೈನ್ ಕೋರ್ಸ್ ನಿಮಗೆ ಸೂಕ್ತವಾಗಿ ರುತ್ತದೆ. ಸಿರಾಮಿಕ್ ಮತ್ತು ಗ್ಲಾಸ್ ಡಿಸೈನ್, ಪೀಠೋಪಕರಣಗಳ ವಿನ್ಯಾಸ, ಉತ್ಪನ್ನ ವಿನ್ಯಾಸ, ಆ್ಯನಿಮೇಷನ್ ಡಿಸೈನ್, ಟೆಕ್ಸ್‌ಟೈಲ್ ಡಿಸೈನ್ ಇತ್ಯಾದಿಗಳು ಈ ಕೋರ್ಸ್‌ನಲ್ಲಿ ಒಳಗೊಂಡಿವೆ.

-------------------------------------------------------------------

ಡಾ.ಅನಂತ ಪ್ರಭು

ಸಹಾಯಕ ಪ್ರೊಫೆಸರ್

ಕಂಪ್ಯೂಟರ್ ಇಂಜಿನಿಯರಿಂಗ್ ಮತ್ತು ಉದ್ಯಮಾಡಳಿತ ವಿಭಾಗ

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್

ಮ್ಯಾನೇಜ್‌ಮೆಂಟ್, ಮಂಗಳೂರು

Writer - ಡಾ.ಅನಂತ ಪ್ರಭು

contributor

Editor - ಡಾ.ಅನಂತ ಪ್ರಭು

contributor

Similar News