ಮೆಡಿಕಲ್ ಕಾಲೇಜು ಹಗರಣ : ಭಾರತೀಯ ಮೂಲದ ಮೂವರ ಬಂಧನ
ಜೊಹಾನ್ಸ್‌ಬರ್ಗ್, ಮೇ 16: ದಕ್ಷಿಣ ಆಫ್ರಿಕಾದ ವಿವಿಗಳಲ್ಲಿ ವೈದ್ಯಕೀಯ ಮತ್ತಿತರ ಆರೋಗ್ಯ ವಿಜ್ಞಾನ ಕೋರ್ಸ್‌ಗಳಿಗೆ ಸೇರಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಹಣ ಪಡೆದು ಸೀಟು ಒದಗಿಸಿಕೊಡುವ ಭಾರೀ ಹಗರಣವೊಂದು ಬೆಳಕಿಗೆ ಬಂದಿದ್ದು, ಭಾರತೀಯ ಮೂಲದ ಮೂವರನ್ನು ಬಂಧಿಸಲಾಗಿದೆ. ದರ್ಬಾನ್‌ನಲ್ಲಿರುವ ‘ಲಿಟಲ್ ಗುಜರಾತ್ ರೆಸ್ಟಾರೆಂಟ್’ನ ಮಾಲಕರಾದ ವರ್ಷ(44 ವರ್ಷ), ಹಿತೇಶ್ ಕುಮಾರ್ ಭಟ್ಟ್(46 ವರ್ಷ) ಮತ್ತು ಶಿಕ್ಷಕ ಪ್ರೇಶ್ನಿ ಹಿರಾಮನ್(55 ವರ್ಷ) ಬಂಧಿತ ವ್ಯಕ್ತಿಗಳು.
ಇವರು ಕ್ವಾಝುಲು-ನತಲ್ ವಿವಿಯ ನೆಲ್ಸನ್ ಮಂಡೇಲ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸೀಮಿತವಾಗಿರುವ ಸೀಟುಗಳನ್ನು ಹಣ ಪಡೆದು ದೊರಕಿಸಿಕೊಡುವ ಜಾಲವೊಂದರ ಸದಸ್ಯರಾಗಿದ್ದಾರೆ ಎನ್ನಲಾಗಿದೆ.
ಕುಟುಕು ಕಾರ್ಯಾಚರಣೆಯ ಮೂಲಕ ಇವರನ್ನು ಬಂಧಿಸಲಾಗಿದೆ. ಫಾರ್ಮಸಿ ಕೋರ್ಸ್‌ಗೆ ಪ್ರವೇಶ ಬಯಸುವ ವಿದ್ಯಾರ್ಥಿಯ ತಂದೆ ಎಂದು ಹೇಳಿಕೊಂಡ ‘ಸಂಡೆ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರನೋರ್ವ ಹಿರಾಮನ್‌ನನ್ನು ಸಂಪರ್ಕಿಸಿ, ತನ್ನ ಮಗನಿಗೆ ಸೀಟು ತೆಗೆಸಿಕೊಡುವಂತೆ ಕೇಳಿಕೊಂಡಿದ್ದ. 18,987 ಡಾಲರ್ ಮೊತ್ತ ಪಾವತಿಸಿದರೆ ತಕ್ಷಣ ಸೀಟು ದೊರಕಿಸಿಕೊಡುವುದಾಗಿಯೂ, ವೈದ್ಯಕೀಯ ಸೀಟು ಬೇಕಿದ್ದರೆ ಇದರ ದ್ವಿಗುಣ ಮೊತ್ತ ಪಾವತಿಸಬೇಕೆಂದು ಹಿರಾಮನ್ ತಿಳಿಸಿದ್ದ ಎನ್ನಲಾಗಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ತಲಾ 3000 ಡಾಲರ್ ಜಾಮೀನು ಪಡೆದು ಇವರನ್ನು ಬಿಡುಗಡೆಗೊಳಿಸಲಾಗಿದೆ.