×
Ad

ರಶ್ಯ ಜೊತೆಗೆ ಗುಪ್ತ ಮಾಹಿತಿ ಹಂಚಿಕೊಂಡ ಟ್ರಂಪ್

Update: 2017-05-16 19:58 IST

ವಾಶಿಂಗ್ಟನ್, ಮೇ 16: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ವಿರುದ್ಧದ ಯೋಜಿತ ಕಾರ್ಯಾಚರಣೆಗೆ ಸಂಬಂಧಿಸಿದ ಅತ್ಯಂತ ರಹಸ್ಯ ಮಾಹಿತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಶ್ಯದ ವಿದೇಶ ಸಚಿವ ಮತ್ತು ರಾಯಭಾರಿಗೆ ಸೋರಿಕೆ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.

ಟ್ರಂಪ್, ರಶ್ಯದ ವಿದೇಶ ಸಚಿವ ಸರ್ಗಿ ಲವ್ರೊವ್ ಮತ್ತು ರಶ್ಯದ ರಾಯಭಾರಿ ಸರ್ಗಿ ಕಿಸ್‌ಲ್ಯಾಕ್ ಕಳೆದ ವಾರ ಶ್ವೇತಭವನದಲ್ಲಿ ಭೇಟಿಯಾಗಿದ್ದಾಗ ಈ ಸೋರಿಕೆಯಾಗಿದೆ ಎಂಬುದಾಗಿ ‘ದ ವಾಶಿಂಗ್ಟನ್ ಪೋಸ್ಟ್’ ಮೊದಲ ಬಾರಿಗೆ ವರದಿ ಮಾಡಿದೆ.

ಅಮೆರಿಕದ ಅಧಿಕಾರಿಗಳ ವಿನಂತಿಯಂತೆ ಸೋರಿಕೆಯ ವಿವರಗಳನ್ನು ತಾನು ಬಹಿರಂಗಪಡಿಸುವುದಿಲ್ಲ ಎಂದು ಪತ್ರಿಕೆ ಹೇಳಿದೆ.

ವಿವರಗಳನ್ನು ಬಹಿರಂಗಪಡಿಸುವುದು ಗುಪ್ತಚರ ಮಾಹಿತಿ ಕಲೆಹಾಕುವ ಕೆಲಸವನ್ನು ಅಪಾಯಕ್ಕೆ ಗುರಿಪಡಿಸುತ್ತದೆ ಎಂಬ ಭೀತಿಯನ್ನು ಅಧಿಕಾರಿಗಳು ಹೊಂದಿದ್ದಾರೆ.

‘‘ನನಗೆ ಅಮೋಘ ಗುಪ್ತಚರ ಮಾಹಿತಿ ಲಭಿಸುತ್ತದೆ. ಇಂಥ ಗುಪ್ತ ಮಾಹಿತಿಗಳ ಬಗ್ಗೆ ಜನರು ನನಗೆ ಪ್ರತಿ ದಿನ ವಿವರಗಳನ್ನು ಕೊಡುತ್ತಾರೆ’’ ಎಂಬುದಾಗಿ ರಶ್ಯದ ವಿದೇಶ ಸಚಿವರು ಮತ್ತು ರಾಯಭಾರಿ ಜೊತೆಗಿನ ಭೇಟಿಯಲ್ಲಿ ಟ್ರಂಪ್ ಹೇಳಿದರು ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಈ ಸಂಭಾಷಣೆಯ ಬಗ್ಗೆ ಅರಿವಿರುವ ಅಧಿಕಾರಿಯೊಬ್ಬರನ್ನು ಪತ್ರಿಕೆ ಉಲ್ಲೇಖಿಸಿದೆ. ಬಳಿಕ, ಟ್ರಂಪ್ ಈ ಬಗ್ಗೆ ಕೊಂಚ ವಿವರಣೆ ನೀಡಿದರು ಎಂದು ವರದಿ ತಿಳಿಸಿದೆ.

ಆದಾಗ್ಯೂ, ನಿರ್ದಿಷ್ಟ ವಿಷಯಗಳ ಬಗ್ಗೆ ಟ್ರಂಪ್ ಚರ್ಚಿಸಿಲ್ಲ ಹಾಗೂ ಗುಪ್ತಚರ ಮಾಹಿತಿ ಸಂಗ್ರಹ ವಿಧಾನವನ್ನು ಅವರು ಬಹಿರಂಗಪಡಿಸಿಲ್ಲ ಎಂದಿದೆ.  ಆದರೆ, ನಿರ್ದಿಷ್ಟ ಪಿತೂರಿಯನ್ನು ಐಸಿಸ್ ಹೇಗೆ ಜಾರಿಗೊಳಿಸುತ್ತದೆ ಹಾಗೂ ಇಂಥ ದಾಳಿ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಎಷ್ಟು ಹಾನಿಯನ್ನು ಉಂಟುಮಾಡಬಹುದು ಎಂಬ ಬಗ್ಗೆ ಟ್ರಂಪ್ ಚರ್ಚಿಸಿದರು ಎಂದು ಪತ್ರಿಕೆ ವರದಿ ಮಾಡಿದೆ.

ಆದರೆ, ರಶ್ಯದ ಸಚಿವರು ಮತ್ತು ರಾಯಭಾರಿ ಜೊತೆಗಿನ ಸಭೆಯ ಯಾವುದೇ ಅವಧಿಯಲ್ಲಿ ಯಾವುದೇ ಗುಪ್ತಚರ ಮೂಲಗಳು ಅಥವಾ ವಿಧಾನಗಳ ಬಗ್ಗೆ ಚರ್ಚಿಸಲಾಗಿಲ್ಲ ಹಾಗೂ ಈಗಾಗಲೇ ಸಾರ್ವಜನಿಕವಾಗಿ ಗೊತ್ತಿರದ ಸೇನಾ ಕಾರ್ಯಾಚರಣೆಯನ್ನು ಬಹಿರಂಗಪಡಿಸಲಾಗಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್. ಮೆಕ್‌ಮಾಸ್ಟರ್ ಹೇಳಿಕೆಯೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News