ಬಿಎಸ್ಸೆಫ್ ನೇಮಕಾತಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ ಕಾಶ್ಮೀರಿ ಯುವಕನಿಗೆ ಉಗ್ರರ ಬೆದರಿಕೆ
ಹೊಸದಿಲ್ಲಿ, ಮೇ 16: ತನಗೆ ಮತ್ತು ತನ್ನ ಸೋದರಿಗೆ ಉಗ್ರರಿಂದ ಬೆದರಿಕೆ ಬಂದಿದೆ ಎಂದು ಬಿಎಸ್‌ಎಫ್(ಗಡಿ ಭದ್ರತಾ ಪಡೆ) ನೇಮಕಾತಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕಾಶ್ಮೀರದ ನಬೀಲ್ ಅಹ್ಮದ್ ವಾನಿ ಕೇಂದ್ರ ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಭಯೋತ್ಪಾದಕರು ಈಗ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿರುವ ಕಾಶ್ಮೀರಿಗಳನ್ನು ಗುರಿ ಮಾಡಿಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ. ಸದಾ ಭಯದ ನೆರಳಲ್ಲೇ ಜೀವಿಸಬೇಕಾಗಿದೆ. ನಮಗೆ ನೆಮ್ಮದಿಯೇ ಇಲ್ಲವಾಗಿದೆ ಎಂದವರು ತಿಳಿಸಿದ್ದಾರೆ.
ಕಳೆದ ವರ್ಷ ನಡೆದಿದ್ದ ಬಿಎಸ್‌ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ನಬೀಲ್ ಅಹ್ಮದ್ ವಾನಿ ಅಗ್ರಸ್ಥಾನ ಪಡೆದಿದ್ದಾರೆ. ಇವರ ಸೋದರಿ ನಿದಾ ರಫೀಕ್ ಚಂಡೀಗಡದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು ಹಾಸ್ಟೆಲ್‌ನಲ್ಲಿ ಉಳಕೊಂಡಿದ್ದಾರೆ.
ಈಕೆ ಕಾಶ್ಮೀರದವರಾದ ಕಾರಣ ಹಾಸ್ಟೆಲ್ ತೊರೆದು ಬೇರೆ ಕಡೆ ವಸತಿ ವ್ಯವಸ್ಥೆ ಮಾಡುವಂತೆ ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ . ವೈಯಕ್ತಿಕ ಪ್ರಕರಣಗಳಲ್ಲಿ ಬಿಎಸ್‌ಎಫ್ ಅನ್ನು ಎಳೆದು ತರಲು ನನಗೆ ಇಷ್ಟವಿಲ್ಲ ಎಂದು ತಿಳಿಸಿರುವ ನಬೀಲ್ ಅಹ್ಮದ್, ತನ್ನ ಸೋದರಿಗೆ ಬೇರೆ ಕಡೆ ವಸತಿ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾ ಗಾಂಧಿಗೆ ಪತ್ರ ಬರೆದು ವಿನಂತಿಸಿದ್ದರು.
ಮರುದಿನವೇ ಇದಕ್ಕೆ ಸ್ಪಂದಿಸಿದ ಮೇನಕಾ ಗಾಂಧಿ, ಕಾಲೇಜು ಅಧಿಕಾರಿಗಳಿಗೆ ಪತ್ರ ಬರೆದು ವಿಚಾರಿಸಿದ್ದರು. ಆ ಬಳಿಕ ನನ್ನ ಸೋದರಿಗೆ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ದೊರೆತಿದೆ ಎಂದು ನಬೀಲ್ ಅಹ್ಮದ್ ತಿಳಿಸಿದ್ದಾರೆ. ಆಕೆ ಹಾಸ್ಟೆಲ್ ರೂಮಿನಲ್ಲಿ ಭದ್ರತೆಯಲ್ಲಿ ಇರುತ್ತಾಳೆ ಎಂದು ನನಗೆ ನೆಮ್ಮದಿಯಿದೆ. ಪದವಿ ಮುಗಿಸಿ, ಸೈನ್ಯಕ್ಕೆ ಸೇರ್ಪಡೆಗೊಳ್ಳುವ ಮೂಲಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ರಪ್ರಥಮ ಕಾಶ್ಮೀರಿ ಮಹಿಳೆಯಾಗಬೇಕು ಎಂಬ ಆಕೆಯ ಹಂಬಲ ಈಡೇರುವ ಭರವಸೆಯಿದೆ ಎಂದರು.
ರಜೆಯಲ್ಲಿ ಊರಿಗೆ ತೆರಳುವಾಗ ತಮ್ಮಂದಿಗೆ ಶಸ್ತ್ರಾಸ್ತ್ರಗಳನ್ನು ಒಯ್ಯಲು ಅನುಮತಿ ನೀಡಬೇಕೆಂದು ಬಿಎಸ್‌ಎಫ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಲೆಫ್ಟಿನೆಂಟ್ ಉಮ್ಮರ್ ಫಯಾಝ್ ಅವರನ್ನು ಕಾಶ್ಮೀರದಲ್ಲಿ ಹತ್ಯೆ ಮಾಡಿದ ಘಟನೆಯ ಬಳಿಕ ನನ್ನ ಕುಟುಂಬದ ಬಗ್ಗೆ ಕಳವಳ ಹೆಚ್ಚಿದೆ. ನನ್ನ ತಾಯಿ ಜಮ್ಮುವಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ನನ್ನ ಸೋದರಿ ಚಂಡೀಗಡದಲ್ಲಿದ್ದಾಳೆ. ಈಗ ಭಯೋತ್ಪಾದಕರು ನಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡಿರುವುದು ಚಿಂತೆಗೆ ಕಾರಣವಾಗಿದೆ ಎಂದು ನಬೀಲ್ ಅಹ್ಮದ್ ಹೇಳಿದ್ದಾರೆ.