ತಿರುಪತಿ ತಿಮ್ಮಪ್ಪನನ್ನೂ ಬಿಡದ ರ‍್ಯಾನ್ಸಮ್‌ವೇರ್
ತಿರುಮಲ,ಮೇ 17: ಜಗತ್ತನ್ನೇ ತಲ್ಲಣಗೊಳಿಸಿರುವ ವೈರಸ್ ಕಾಟ ತಿರುಪತಿ ತಿಮ್ಮಪ್ಪನನ್ನೂ ಬಿಟ್ಟಿಲ್ಲ. ತಿರುಮಲ ತಿರುಪತಿ ದೇವಸ್ಥಾನದ ಕಂಪ್ಯೂಟರ್ ವ್ಯವಸ್ಥೆ ‘ವಾನ್ನಾ ಕ್ರೈ ರ್ಯಾನ್ಸಮ್‌ವೇರ್ ’ ದಾಳಿಗೆ ಗುರಿಯಾಗಿದ್ದು, ಆಡಳಿತಾತ್ಮಕ ಕಾರ್ಯನಿರ್ವಹಣೆಯಲ್ಲಿ ಬಳಸಲಾಗುತ್ತಿರುವ 10 ಕಂಪ್ಯೂಟರ್‌ಗಳು ಲಾಕ್ ಆಗಿವೆ.
ಮುನ್ನೆಚ್ಚರಿಕೆ ಕ್ರಮವಾಗಿ ಇತರ 20 ಕಂಪ್ಯೂಟರ್‌ಗಳನ್ನು ಬಳಸುವುದನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ.
ದೇವಸ್ಥಾನದ ಕೆಲವು ಕಂಪ್ಯೂಟರ್‌ಗಳು ರ್ಯಾನ್ಸಮ್‌ವೇರ್ ದಾಳಿಗೆ ಗುರಿಯಾಗಿವೆ. ಆದರೆ ಈ ಎಲ್ಲ ಕಂಪ್ಯೂಟರ್‌ಗಳು ಆಡಳಿತಾತ್ಮಕ ಕಾರ್ಯಗಳಿಗೆ ಸಂಬಂಧಿಸಿವೆ. ಟಿಕೆಟ್ ಮಾರಾಟ ಮತ್ತು ಭಕ್ತರಿಗೆ ಸಂಬಂಧಿಸಿದ ಸೇವೆಗಳನ್ನು ನಿರ್ವಹಿಸುತ್ತಿರುವ ಕಂಪ್ಯೂಟರ್ ಗಳು ವೈರಸ್ ಪೀಡಿತವಾಗಿಲ್ಲ. ಭಕ್ತರಿಗೆ ಸೇವೆಯಲ್ಲಿ ಯಾವುದೇ ವ್ಯತ್ಯಯವುಂಟಾಗಿಲ್ಲ ಎಂದು ಕಾರ್ಯ ನಿರ್ವಹಣಾಧಿಕಾರಿ ಅನಿಲ ಕುಮಾರ್ ಸಿಂಘಾಲ್ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ತಿರುಮಲ ತಿರುಪತಿ ದೇವಸ್ವಂನ ಮಾಹಿತಿ ತಂತ್ರಜ್ಞಾನ ವಿಭಾಗವು ಟಾಟಾ ಕನ್ಸಲ್ಟನ್ಸಿ ಸರ್ವಿಸಿಸ್ ನೆರವಿನೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಹೆಣಗಾಡುತ್ತಿದೆ. ದಾಳಿಗೆ ಗುರಿಯಾಗಿರುವ ಕಂಪ್ಯೂಟರ್‌ಗಳು ಹಳೆಯ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿದ್ದವು ಎನ್ನುವುದನ್ನು ದೇವಸ್ಥಾನದ ಅಧಿಕಾರಿಗಳು ದೃಢಪಡಿಸಿದ್ದಾರೆ.