ಅರ್ನಬ್ ರಿಪಬ್ಲಿಕ್ ವಿರುದ್ಧ ಟೈಮ್ಸ್ ನೌ ನಿಂದ ಕ್ರಿಮಿನಲ್ ದೂರು

Update: 2017-05-17 09:25 GMT

ಮುಂಬೈ, ಮೇ 17: ಟೈಮ್ಸ್ ನೌ ಟಿವಿ ಚಾನಲ್ ನಡೆಸುವ ಬೆನ್ನೆಟ್, ಕೋಲ್ಮನ್ ಎಂಡ್ ಕೋ ಲಿಮಿಟೆಡ್ (ಬಿಸಿಸಿಎಲ್) ರಿಪಬ್ಲಿಕ್ ಟಿವಿಯನ್ನು ಹೊಸದಾಗಿ ಆರಂಭಿಸಿರುವ ತನ್ನ ಮಾಜಿ ಉದ್ಯೋಗಿ ಅರ್ನಬ್ ಗೋಸ್ವಾಮಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದು, ಅವರು ಹಾಗೂ ಪತ್ರಕರ್ತೆ ಪ್ರೇಮಾ ಶ್ರೀದೇವಿ ತನ್ನ ಕಾಪಿರೈಟ್ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದೆ.

ಬಿಸಿಸಿಎಲ್ ವಿವಿಧ ಸೆಕ್ಷನ್ ಗಳನ್ವಯ ಆಝಾದ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆಯಲ್ಲದೆ ಕಳ್ಳತನ, ಕ್ರಿಮಿನಲ್ ವಿಶ್ವಾಸ ದ್ರೋಹ, ತನ್ನ ಆಸ್ತಿಯ ದುರುಪಯೋಗ ಮುಂತಾದ ಆರೋಪಗಳನ್ನು ಹೊರಿಸಿದೆ. ಮೇ 6 ಹಾಗೂ 8ರಂದು ವಿವಿಧ ಸಂದರ್ಭಗಳಲ್ಲಿ ರಿಪಬ್ಲಿಕ್ ಟಿವಿ ತನ್ನ ಕಾಪಿರೈಟ್ ಉಲ್ಲಂಘಿಸಿದೆ ಎಂದು ಅದು ದೂರಿದೆ.

ಅರ್ನಬ್ ಅವರ ರಿಪಬ್ಲಿಕ್ ಟಿವಿ ಆರಂಭಗೊಂಡ ಮೊದಲ ದಿನದಂದೇ, ಅಂದರೆ ಮೇ 6ರಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ಜೈಲಿನಲ್ಲಿರುವ ಮಾಜಿ ಸಂಸದ ಶಹಾಬುದ್ದೀನ್ ಅವರ ನಡುವೆ ನಡೆದ ಫೋನ್ ಸಂಭಾಷಣೆಗಳ ಆಡಿಯೋ ಟೇಪ್ ಪ್ರಸಾರ ಮಾಡಿ ಇದು ದೊಡ್ಡ ‘ಬ್ರೇಕಿಂಗ್ ನ್ಯೂಸ್’ ಎಂಬಂತೆ ಬಿಂಬಿಸಿತ್ತು. ಅದೇ ರೀತಿ ಮೇ 8ರಂದು ಪ್ರಸಾರವಾದ ಇನ್ನೊಂದು ಕಾರ್ಯಕ್ರದಲ್ಲಿ ಈಗ ರಿಪಬ್ಲಿಕ್ ಟಿವಿ ಉದ್ಯೋಗಿಯಾಗಿರುವ ಟೈಮ್ಸ್ ನೌ ಮಾಜಿ ಉದ್ಯೋಗಿ ಶ್ರೀದೇವಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರು ಅವರ ದಿವಂಗತ ಪತ್ನಿ ಸುನಂದಾ ತರೂರ್ ಮತ್ತು ಅವರ ಮನೆ ಕೆಲಸದಾಳು ನಾರಾಯಣ ಅವರೊಡನೆ ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಟೇಪ್ ಪ್ರಸಾರ ಮಾಡಿತ್ತು.

ಈ ಎರಡೂ ಟೇಪ್ ಗಳು ಅರ್ನಬ್ ಹಾಗೂ ಶ್ರೀದೇವಿ ಟೈಮ್ಸ್ ನೌ ಉದ್ಯೋಗಿಗಳಾಗಿದ್ದಾಗ ಅವರ ಬಳಿಯಿತ್ತು ಎಂಬುದು ದೂರಿನಲ್ಲಿ ಉಲ್ಲೇಖಗೊಂಡಿದೆ. ಈ ಟೇಪ್ ಗಳು ತಮ್ಮ ಬಳಿ ಎರಡು ವರ್ಷಗಳಿಂದ ತಾವು ಹಿಂದಿನ ಸಂಸ್ಥೆಯಲ್ಲಿ ಇರುವಾಗಲೇ ಇತ್ತು ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಿಸಿಸಿಎಲ್ ತನ್ನ ಟೈಮ್ಸ್ ನೌ ಚಾನಲ್ ಅನ್ನು ಜನವರಿ 31, 2006ರಲ್ಲಿ ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News