ಹೆದ್ದಾರಿಗಳಲ್ಲಿ ಕಸ ಎಸೆದರೆ ಮನೆಗೇ ನೋಟಿಸ್ ಬರುತ್ತೆ!

Update: 2017-05-17 18:32 GMT

ಮಂಗಳೂರು, ಮೇ 17: ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಗೊಳಪಡುವ ಹೆದ್ದಾರಿಯ ಇಕ್ಕೆಲಗಳಲ್ಲಿ ಕಸ ಎಸೆದವರ ಮನೆಗೇ ಬರಬಹುದು ನೋಟಿಸ್. ಹೆದ್ದಾರಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ದ.ಕ. ಜಿಪಂ ಹೀಗೊಂದು ಕಾನೂನು ಪ್ರಕ್ರಿಯೆಗೆ ಮುಂದಾಗಿದೆ.

ದ.ಕ. ಜಿಪಂ ಸಿಇಒ ಡಾ.ಎಂ.ಆರ್.ರವಿ ಮಾರ್ಗದರ್ಶನದಲ್ಲಿ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಸೇರಿದಂತೆ ಐದು ಮಂದಿ ಸದಸ್ಯರ ಗಸ್ತು ಪಡೆಯೊಂದನ್ನು ರಚಿಸಲಾಗಿದೆ. ಈ ಗಸ್ತು ಪಡೆಯು ಹೆದ್ದಾರಿಗಳಲ್ಲಿ ಗಸ್ತು ಕಾರ್ಯ ನಡೆಸಲಿದೆ. ಹೆದ್ದಾರಿಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಕಸ ಎಸೆಯುವವರ ವಾಹನ ಸಂಖ್ಯೆಯನ್ನು ದಾಖಲಿಸಿಕೊಂಡು ಮೋಟಾರು ವೆಹಿಕಲ್ ಕಾಯ್ದೆಯ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯಕ್ಕೆ ಭಂಗ ತರುವ ನಿಯಮದಡಿ (ಸಿಆರ್‌ಪಿಸಿ 133) ಸಂಬಂಧಪಟ್ಟ ಇಲಾಖೆಯಿಂದಲೇ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಪಡೆದವರು ಕಾನೂನು ಪ್ರಕಾರವಾಗಿಯೇ ಮುಂದಿನ ಪ್ರಕ್ರಿಯೆಗೊಳಪಡ

ೇಕಾಗುತ್ತದೆ. ಜವಾಬ್ದಾರಿಯುತ ಹಾಗೂ ಪ್ರಜ್ಞಾವಂತ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗೂ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಜಿಪಂ ಸಿಇಒ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಈ ಗಸ್ತು ಪಡೆ ಈಗಾಗಲೇ ಕಾರ್ಯಚರಣೆ ಆರಂಭಿಸಿದೆ. ಇಂದು ಕೊಣಾಜೆ ಹೆದ್ದಾರಿಯಲ್ಲಿ ಹಾಗೂ ನಿನ್ನೆ (ಮಂಗಳವಾರ) ಮೂಡುಬಿದಿರೆಯಲ್ಲಿ ಗಸ್ತು ಪಡೆ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಗಳ ಫಲಿತಾಂಶದ ಆಧಾರದಲ್ಲಿ ಆರಂಭಿಕವಾಗಿ 35 ಗ್ರಾಪಂಗಳಲ್ಲಿ ಈ ಗಸ್ತುಪಡೆ ಕಾರ್ಯಾಚರಣೆ ನಡೆಸಲಿದೆ. ಬಳಿಕ ಇದನ್ನು ವಿಸ್ತರಿಸುವ ಆಲೋಚನೆಯೂ ಇದೆ. ಸ್ವಚ್ಛತೆಯ ಕುರಿತಂತೆ ಜನಸಾಮಾನ್ಯರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದು ಅತ್ಯಗತ್ಯ ಎಂದವರು ಹೇಳಿದ್ದಾರೆ.

ರಾಮಕೃಷ್ಣ ಮಿಷನ್ ಆಶ್ರಯದಲ್ಲಿ ಈಗಾಗಲೇ ನಗರದಲ್ಲಿ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ದ.ಕ. ಜಿಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲೂ ಸ್ವಚ್ಛತಾ ಕಾರ್ಯಕ್ಕೆ ಸಹಕರಿಸುವಂತೆ ಜಿಲ್ಲಾ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ.

ಅವರಿಗೆ ಒಪ್ಪಿಗೆ ನೀಡುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಮತ್ತಷ್ಟು ವೇಗ ತುಂಬಲು ಚಿಂತಿಸಲಾಗಿದೆ ಎಂದು ಸಿಇಒ ಡಾ.ರವಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News