ಒಂದು ದಿನ ಆಕೆಯ ಗೊಂಬೆಯ ಜೊತೆ ಆಡಲು ನನಗೆ ಬಿಡುತ್ತಾಳೆ ಎಂದು ಕಾಯುತ್ತಿದ್ದೆ : ಹಫ್ಸ

Update: 2017-05-18 07:17 GMT

ನನ್ನ ನೆರೆಮನೆಯ ಹುಡುಗಿ ಸೋನಿಯಾಗೆ ಅವಳ ತಂದೆ ಒಂದು ಚಂದದ ಗೊಂಬೆ ತಂದು ಕೊಟ್ಟಿದ್ದಾರೆ. ನನ್ನ ಬಳಿ ಯಾವತ್ತೂ ಯಾವುದೇ ಗೊಂಬೆ ಇರಲಿಲ್ಲ. ಇದೇ ಕಾರಣಕ್ಕೆ ನಾನು ಒಂದು ಇಡೀ ದಿನ ಆಕೆಯ ಮನೆಯ ಬಳಿಯೇ ಇದ್ದು ನನಗೆ ಆಕೆಯ ಗೊಂಬೆಯೊಂದಿಗೆ ಆಟವಾಡಲು ಒಮ್ಮೆಯಾದರೂ ಅವಕಾಶ ನೀಡಬಹುದೆಂಬ ನಿರೀಕ್ಷೆಯಿಂದ ಕಾದಿದ್ದೆ. ಆದರೆ ಆಕೆಯ ಗೊಂಬೆಯನ್ನು ನಾನು ದೂರದಿಂದಲೇ ನೋಡಬೇಕಿತ್ತು.

ಕೊಳಚೆಯಲ್ಲಿ ಕೆಲಸ ಮಾಡುವ ಕುಟುಂಬದ ಸದಸ್ಯೆಯಾಗಿದ್ದ ನಾನು ಆ ಗೊಂಬೆಯನ್ನು ಮುಟ್ಟಿದರೆ ಅದಕ್ಕೆ ಧೂಳು ಹಾಗೂ ರೋಗ ತಗಲಬಹುದೆಂದು ಆಕೆ ನನಗೆ ಸ್ಪಷ್ಟವಾಗಿ ಹೇಳಿದ್ದಳು. ನನಗೆ ಅಷ್ಟೊಂದು ಬೇಸರವಾಗಲಿಲ್ಲ. ಆಕೆಯ ಗೊಂಬೆಯೊಂದಿಗೆ ಆಟವಾಡಬೇಕೆಂಬುದು ಮಾತ್ರ ನನ್ನ ಉದ್ದೇಶವಾಗಿತ್ತು. ನಂತರ ಆ ಗೊಂಬೆಯನ್ನು ನನ್ನ ತೊಡೆಯಲ್ಲಿಡುವ ಅವಕಾಶ ನನಗೆ ಸಿಕ್ಕಿತು.

ಆ ದಿನ ಸೋನಿಯಾ ನನ್ನೊಡನೆ ಜಗಳವಾಡಿದಳು. ನಾನು ಮತ್ತೆ ಅವರ ಮನೆಗೆ ಬರಬಾರದೆಂದು ಆಕೆಯ ಹೆತ್ತವರು ಹೇಳಿದರು. ಮನೆಗೆ ಹಿಂದಿರುಗುವ ಹಾದಿಯಲ್ಲಿ ನನ್ನ ಅಣ್ಣ ನನ್ನ ಜತೆಗೆ ಬಂದ ಹಾಗೂ ಏನಾಯಿತೆಂದು ಕೇಳಿದ. ನಾನು ಆತನಿಗೆ ಏನೂ ಹೇಳಲಿಲ್ಲ, ಆತನ ಕೈ ಹಿಡಿದು ಆತನ ಜತೆ ಮನೆಗೆ ನಡೆದುಕೊಂಡು ಹೋದೆನು. ದಾದಾ ಭಾಯಿ ತ್ಯಾಜ್ಯ ಗುಂಡಿಯಲ್ಲಿ ಅಮ್ಮನೊಂದಿಗೆ ಕೆಲಸ ಮಾಡುತ್ತಾರೆ.

ಆತ ನನಗಿಂತ ಎರಡು ವರ್ಷ ದೊಡ್ಡವನು ಹಾಗೂ ಯಾವತ್ತೂ ಆಟವಾಡಲು ಆತನಿಗೆ ಸಮಯವೇ ಸಿಗುವುದಿಲ್ಲ. ಕೆಲವು ವಾರಗಳ ನಂತರ ನನಗೆ ಆ ಗೊಂಬೆ ವಿಚಾರ ವಸ್ತುಶಃ ಮರೆತು ಹೋಗಿತ್ತು. ಆಗ ದಾದಾ ಭಾಯಿ ನನಗೆ ನನ್ನ ಜೀವನದ ಮೊದಲ ಗೊಂಬೆ ‘ಮುನಿಯಾ’ಳನ್ನು ತಂದಿತ್ತನು. ಆಕೆ ತ್ಯಾಜ್ಯ ಗುಂಡಿಯಿಂದ ಬಂದಿದ್ದಳು.

ಆಕೆಗೆ ಸ್ನಾನ ಮಾಡಿಸಲು ನಾವು ಹತ್ತು ಟಕ ಕೊಟ್ಟು ಬಟ್ಟೆ ಒಗೆಯುವ ಹುಡಿ ತಂದು ಆಕೆಯನ್ನು ಚೆನ್ನಾಗಿ ತೊಳೆದೆವು. ಸುಮಾರು ಎರಡು ದಿನಗಳ ಕಾಲ ಆಕೆಯನ್ನು ಒಣಗಿಸಿದವು. ಆಕೆ ಸಂಪೂರ್ಣವಾಗಿ ಒಣಗಿದಾಗ ನಮ್ಮ ಗೊಂಬೆ ಎಷ್ಟೊಂದು ಸುಂದರವಾಗಿದೆ ಎಂದು ನೋಡಿ ದಾದಾ ಭಾಯಿಗೆ ಆಶ್ಚರ್ಯವಾಯಿತು. ‘‘ಏಕೆಂದರೆ ಆಕೆಗೆ ನಿನ್ನಂತಹ ಅಣ್ಣ ಸಿಕ್ಕಿದ್ದಾನೆ,’’ ಎಂದು ನಾನು ಹೇಳಿ ಬಿಟ್ಟೆ.

- ಹಫ್ಸಾ (10)

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News