×
Ad

ಬೊಫೋರ್ಸ್ ಹಗರಣದ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಫಿರಂಗಿ ಪಡೆದ ಭಾರತೀಯ ಸೇನೆ

Update: 2017-05-18 21:12 IST

ಹೊಸದಿಲ್ಲಿ,ಮೇ 18: ಬೊಫೋರ್ಸ್ ಹಗರಣದ ಮೂರು ದಶಕಗಳ ಬಳಿಕ ಗುರುವಾರ ಮೊದಲ ಬಾರಿಗೆ ಭಾರತೀಯ ಸೇನೆಯು ಅಮೆರಿಕದಿಂದ ಎರಡು ಹೊಸ ಫಿರಂಗಿ ವ್ಯವಸ್ಥೆಗಳನ್ನು ಸ್ವೀಕರಿಸಿದೆ. ಈ ಎರಡು ಎಂ-777 ಲಘು ಹೋವಿಟ್ಝರ್‌ಗಳು ಭಾರತವು 145 ಫಿರಂಗಿಗಳ ಖರೀದಿಗಾಗಿ ಅಮೆರಿಕದೊಂದಿಗೆ ಸರಕಾರಿ ಮಟ್ಟದಲ್ಲಿ ಮಾಡಿಕೊಂಡಿ ರುವ 700 ಮಿ.ಡಾ.ಒಪ್ಪಂದದ ಭಾಗವಾಗಿವೆ.
ಸೇನೆಯು ತನ್ನ ಫಿರಂಗಿ ದಳವನ್ನು ಮೇಲ್ದರ್ಜೆಗೇರಿಸಲು ಬೃಹತ್ ಯೋಜನೆ ಯೊಂದನ್ನು ಹೊಂದಿದ್ದು, 22,000 ಕೋ.ರೂ.ಗಳ ಆಧುನೀಕರಣ ಯೋಜನೆಯಡಿ ಐದು ವಿಭಿನ್ನ ಮಾದರಿಗಳ ಫಿರಂಗಿಗಳ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಇಂದು ಬಂದಿರುವ ಎರಡು ಫಿರಂಗಿಗಳನ್ನು ಎತ್ತರದ ಪ್ರದೇಶಗಳಲ್ಲಿ ಚೀನಾದ ವಿರುದ್ಧ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಬಳಸಲಾಗುವುದು. 155 ಮಿ.ಮೀ., 39-ಕ್ಯಾಲಿಬರ್‌ನ ಈ ಫಿರಂಗಿಗಳು ಗರಿಷ್ಠ 30 ಕಿ.ಮೀ.ದಾಳಿಯ ವ್ಯಾಪ್ತಿಯನ್ನು ಹೊಂದಿವೆ.
ಭಾರತವು ತಯಾರಕ ಬಿಎಇ ಸಿಸ್ಟಮ್ಸ್‌ನಿಂದ ನೇರವಾಗಿ 25 ಎಂ-777ಗಳನ್ನು ಆಮದು ಮಾಡಿಕೊಳ್ಳಲಿದ್ದು, ಉಳಿದ ಫಿರಂಗಿಗಳನ್ನು ಮಹಿಂದ್ರಾ ಡಿಫೆನ್ಸ್ ಸಿಸ್ಟಮ್ಸ್‌ನ ಸಹಭಾಗಿತ್ವದಲ್ಲಿ ದೇಶದಲ್ಲಿಯೇ ಜೋಡಣೆ ಮಾಡಲಾಗುತ್ತದೆ.
 ಭಾರತವು 1980ರ ದಶಕದಲ್ಲಿ ಕೊನೆಯ ಬಾರಿಗೆ ಫಿರಂಗಿಗಳನ್ನು ಆಮದು ಮಾಡಿಕೊಂಡಿತ್ತು. ಸ್ವೀಡನ್ನಿನಿಂದ ಬೊಫೋರ್ಸ್ ಗನ್‌ಗಳನ್ನು ಆಮದು ಮಾಡಿಕೊಂಡಿದ್ದ 1.4 ಶತಕೋಟಿ ಡಾ.ಗಳ ವ್ಯವಹಾರವು ಸ್ವೀಡಿಷ್ ಕಂಪನಿಯು ಉನ್ನತ ಭಾರತೀಯ ರಾಜಕಾರಣಿಗಳಿಗೆ 64 ಕೋ.ರೂ.ಗಳನ್ನು ಲಂಚವಾಗಿ ನೀಡಿತ್ತು ಎಂಬ ವರದಿಯ ಬಳಿಕ ವಿವಾದದ ಸುಳಿಯಲ್ಲಿ ಸಿಲುಕಿತ್ತು. ಅದು ಆಗಿನ ಪ್ರಧಾನಿ ರಾಜೀವ ಗಾಂಧಿಯವರನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳುವ ಅವಕಾಶದಿಂದ ವಂಚಿತರನ್ನಾಗಿಸಿತ್ತು. ಅಲ್ಲದೇ ರಕ್ಷಣಾ ಖರೀದಿಯ ಪ್ರಕ್ರಿಯೆಯನ್ನೂ ಗಣನೀಯವಾಗಿ ನಿಧಾನಗೊಳಿಸಿತ್ತು.
ಇತ್ತೀಚಿನ ದಿನಗಳಲ್ಲಿ ಭಾರತೀಯ ಸೇನೆಗಾಗಿ ಆಧುನಿಕ ಫಿರಂಗಿಗಳ ಖರೀದಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News