×
Ad

ಕುಸಿದು ನದಿಗೆ ಬಿದ್ದ ಸೇತುವೆ: ಇಬ್ಬರು ಮೃತ್ಯು, ಹಲವರು ನಾಪತ್ತೆ

Update: 2017-05-18 23:09 IST

ಗೋವಾ, ಮೇ 18: ಕಾಲುಸೇತುವೆಯೊಂದು ಕುಸಿದು ಇಬ್ಬರು ಮೃತಪಟ್ಟು, 40ಕ್ಕೂ ಹೆಚ್ಚುಮಂದಿ ನಾಪತ್ತೆಯಾಗಿರುವ ಘಟನೆ ದಕ್ಷಿಣ ಗೋವಾದಲ್ಲಿ ನಡೆದಿದೆ.

ರಿಕ್ಕೆಟಿ ಸ್ಯಾನ್ ವೋಡರ್ಮ್ ಸೇತುವೆಯ ಮೇಲೆ ಸುಮಾರು 45ರಿಂದ 50 ಜನರು ಸಾಗುತ್ತಿದ್ದ ವೇಳೆ ದಿಢೀರನೆ ಕುಸಿದುಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ. ವ್ಯಕ್ತಿಯೋರ್ವ ಆತ್ಮಹತ್ಯೆಗೈಯುವುದನ್ನು ತಡೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಅದನ್ನು ವೀಕ್ಷಿಸಲು ಜನರು ಜಮಾಯಿಸಿದ್ದರು. ಈ ಸಂದರ್ಭ ಸೇತುವೆ ಕುಸಿದಿದೆ ಎನ್ನಲಾಗಿದೆ,

ತಕ್ಷಣವೇ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದು, ಮೃತರಲ್ಲಿ ಓರ್ವನನ್ನು ಬಸವರಾಜ್ ಮಲ್ವಾಂಕರ್ ಎಂದು ಗುರುತಿಸಲಾಗಿದೆ.

“ಘಟನೆಯ ವಿವರಕ್ಕಾಗಿ ನಾವು ಕಾಯುತ್ತಿದ್ದೇವೆ. ಸೇತುವೆಯ ಮೇಲೆ ಎಷ್ಟು ಜನರಿದ್ದರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನದಿಯಲ್ಲಿದ್ದ ಓರ್ವನ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ” ಎಂದು ಗೋವಾ ಸಚಿವ  ನರೇಂದ್ರ ಸಾವೈಕರ್ ಹೇಳಿದ್ದಾರೆ. ಘಟನೆ ನಡೆದ ಒಂದು ಗಂಟೆಯೊಳಗಾಗಿ 10 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಸೇತುವೆ ಹಳೆಯದಾಗಿದ್ದು, ಆತ್ಮಹತ್ಯೆ ಯತ್ನ ತಡೆಯುವ ಕಾರ್ಯಾಚರಣೆ ವೀಕ್ಷಿಸಲು ಹೆಚ್ಚು ಮಂದಿ ಸೇರದಂತೆ ವಿನಂತಿಸಲಾಗಿತ್ತು. ಸೇತುವೆಯ ಮೇಲೆ 40ಕ್ಕೂ ಹೆಚ್ಚು ಜನರು ನಿಂತಿದ್ದರಿಂದ ಕುಸಿದುಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ” ಎಂದು ಗೋವಾ ಕಲೆಕ್ಟರ್ ಸ್ವಪ್ನಿಲ್ ನಾಯಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News