ಮಕ್ಕಳ ಅಪಹರಣಕಾರರೆಂದು ಶಂಕಿಸಿ ಆರು ಮಂದಿಯನ್ನು ಹೊಡೆದು ಸಾಯಿಸಿದ ಉದ್ರಿಕ್ತ ಗ್ರಾಮಸ್ಥರು

Update: 2017-05-19 07:08 GMT

ರಾಂಚಿ,ಮೇ 19 : ಮಕ್ಕಳನ್ನು ಅಪಹರಿಸುವ ಜಾಲವೊಂದು ಸಕ್ರಿಯವಾಗಿದೆಯೆಂಬ ವದಂತಿಗಳ ನಡುವೆಯೇ ಜಾರ್ಖಂಡ್ ರಾಜ್ಯದ ಸೆರೈಕೆಲ-ಖರ್ಸವಾನ್ ಜಿಲ್ಲೆಯ ರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರದೇಶಗಳಲ್ಲಿ ಗುರುವಾರ ನಡೆದ ಘಟನೆಗಳಲ್ಲಿ ಉದ್ರಿಕ್ತ ಗ್ರಾಮಸ್ಥರು ಆರು ಮಂದಿಯನ್ನು ಹೊಡೆದು ಸಾಯಿಸಿದ್ದಾರೆ. ಉದ್ರಿಕ್ತ ಜನ ಎರಡು ಪೊಲೀಸ್ ವಾಹನಗಳಿಗೆ ಬೆಂಕಿಯಿಕ್ಕಿ ಹಾನಿಗೊಳಿಸಿದ್ದಾರೆ,

ನಗಧ್ ಎಂಬಲ್ಲಿ ಮೂರು ಮಂದಿಯನ್ನು ಅವರನ್ನು ಮನೆಯಿಂದ ಹೊರಗೆಳೆದ ದುಷ್ಕರ್ಮಿಗಳ ಗುಂಪು ಅವರನ್ನು ಹೊಡೆದು ಸಾಸಿದೆಯಲ್ಲದೆ ವೃದ್ಧೆಯೊಬ್ಬಳ ಮೇಲೆ ಗಂಭೀರ ಹಲ್ಲೆ ನಡೆಸಿದೆ. ಮಕ್ಕಳನ್ನು ಅಪಹರಿಸುವ ಜಾಲಕ್ಕೆ ಸೇರಿದವರು ಎಂಬ ಶಂಕೆಯೇ ಈ ಘಟನೆಗೆ ಕಾರಣವೆನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಜನರು ಅವರ ಮೇಲೆಯೇ ಕಲ್ಲು ತೂರಲಾರಂಭಿಸಿದ್ದರಿಂದ ಅವರಲ್ಲಿ ಹಲವರು ಗಾಯಗೊಂಡಿದ್ದಾರೆ.

ಇದಕ್ಕೂ ಮೊದಲು ಸೊಸೊಮೊಲಿ ಗ್ರಾಮದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಇಬ್ಬರನ್ನು ಹೊಡೆದ ಸಾಯಿಸಲಾಗಿದೆ. ಶೋಭಾಪುರ ಗ್ರಾಮದಲ್ಲಿಯೂ ವ್ಯಕ್ತಿಯೊಬ್ಬನನ್ನು ಮಕ್ಕಳ ಅಪಹರಣಕಾರನೆಂದು ಶಂಕಿಸಿ ಹತ್ಯೆಗೈಯ್ಯಲಾಗಿದೆ.

ಪೂರ್ವ ಸಿಂಗಭೂಮ್ ಜಿಲ್ಲೆಯ ಜದುಗೊರ ಪಟ್ಟಣದಲ್ಲಿ ಮಕ್ಕಳ ಕಳ್ಳಸಾಗಾಟ ಜಾಲದ ವ್ಯಕ್ತಿಗಳೆಂದು ಇಬ್ಬರಿಗೆ ಥಳಿಸಿ ಕೊಲೆಗೈದ ಘಟನೆ ನಡೆದು ಎರಡು ವಾರಗಳ ನಂತರ ಗುರುವಾರದ ಘಟನೆ ನಡೆದಿದೆ.

ವದಂತಿಗಳಿಗೆ ಕಿವಿಗೊಡದಂತೆ ಪೊಲೀಸರು ಗ್ರಾಮಸ್ಥರನ್ನು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News