‘ಸುಪ್ರೀಂ ಆದೇಶ ಅಮಾನತು ಮಾಡಿ’ : ರಾಷ್ಟ್ರಪತಿಗೆ ನ್ಯಾ.ಕರ್ಣನ್ ಮೊರೆ

Update: 2017-05-19 11:09 GMT

ಹೊಸದಿಲ್ಲಿ,ಮೇ 19: ನ್ಯಾಯಾಂಗ ನಿಂದನೆಗಾಗಿ ಕಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಿ.ಎಸ್.ಕರ್ಣನ್ ಅವರಿಗೆ ಆರು ತಿಂಗಳು ಜೈಲುಶಿಕ್ಷೆಯನ್ನು ವಿಧಿಸಿರುವ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅಮಾನತುಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರ್ಣನ್ ಪರ ವಕೀಲರು ತಿಳಿಸಿದ್ದಾರೆ.

ಆದರೆ ಇಂತಹ ಅರ್ಜಿಯ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲ ಎಂದು ರಾಷ್ಟ್ರಪತಿಗಳ ಕಚೇರಿಯು ತಿಳಿಸಿದೆ. ಜೈಲುಶಿಕ್ಷೆಯನ್ನು ಅಮಾನತುಗೊಳಿಸುವಂತೆ/ತಡೆಯಾಜ್ಞೆ ನೀಡುವಂತೆ ಕೋರಿ ಸಂವಿಧಾನದ ವಿಧಿ 72ರಡಿ ನ್ಯಾ.ಕರ್ಣನ್ ಪರವಾಗಿ ಗುರುವಾರ ಇ-ಮೇಲ್ ಮೂಲಕ ಅಹವಾಲನ್ನು ರವಾನಿಸಲಾಗಿದೆ ಎಂದು ವಕೀಲರು ತಿಳಿಸಿದರು.

ಸಂವಿಧಾನದ ವಿಧಿ 72ರಡಿ ಯಾವುದೇ ವ್ಯಕ್ತಿಗೆ ಯಾವುದೇ ಅಪರಾಧಕ್ಕಾಗಿ ವಿಧಿಸಲಾಗಿರುವ ಶಿಕ್ಷೆ ಅಥವಾ ದಂಡನೆಯನ್ನು ರದ್ದುಗೊಳಿಸುವ, ಕ್ಷಮಾದಾನ ನೀಡುವ ಅಧಿಕಾರವನ್ನು ರಾಷ್ಟ್ರಪತಿಗಳು ಹೊಂದಿರುತ್ತಾರೆ.

ನ್ಯಾ.ಕರ್ಣನ್ ಅವರ ವಕೀಲರಾಗಿರುವ ಮ್ಯಾಥ್ಯೂಸ್ ಜೆ.ನೆಡುಂಪರ ಮತ್ತು ಎ.ಸಿ.ಫಿಲಿಪ್ ಅವರು ಸಿದ್ಧಪಡಿಸಿರುವ ಅರ್ಜಿಯು ಮೇ 9ರಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರದ ಬೆಳವಣಿಗೆಗಳನ್ನು ಪ್ರಸ್ತಾಪಿಸಿದೆ.

ತನಗೆ ವಿಧಿಸಲಾಗಿರುವ ಜೈಲುಶಿಕ್ಷೆಯ ವಿರುದ್ಧ ನ್ಯಾ.ಕರ್ಣನ್ ಅವರು ರಾಷ್ಟ್ರಪತಿ, ಪ್ರಧಾನಿ ಮತ್ತಿತರರಿಗೆ ಪತ್ರಗಳನ್ನು ಬರೆದಿದ್ದಾರೆ ಎಂದು ಅವರ ವಕೀಲರು ಈ ಹಿಂದೆ ಹೇಳಿದ್ದರು.

ಮೇ 9ರ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಕೋರಿ ನ್ಯಾ.ಕರ್ಣನ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಅರ್ಜಿಯನ್ನು ಸಲ್ಲಿಸಿದ್ದಾರೆ, ಆದರೆ ಅದರ ತುರ್ತು ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News