ಭರವಸೆಗಳನ್ನು ಈಡೇರಿಸದ ಬಿಜೆಪಿ ನಾಯಕರು: ಹುತಾತ್ಮ ಯೋಧನ ಕುಟುಂಬಸ್ಥರು, ಗ್ರಾಮಸ್ಥರಿಂದ ಉಪವಾಸ ಧರಣಿ

Update: 2017-05-19 12:19 GMT

ಉತ್ತರ ಪ್ರದೇಶ, ಮೇ 19: ಬಿಜೆಪಿ ನಾಯಕರು ನೀಡಿರುವ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿರುವ ಹುತಾತ್ಮ ಯೋಧ ಸುಧೇಶ್ ಕುಮಾರ್ ಅವರ ಕುಟುಂಬಸ್ಥರು ಅನಿರ್ದಿಷ್ಟಾವಧಿ ಉಪವಾಸ ಧರಣಿ ಆರಂಭಿಸಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗ್ರಾಮಕ್ಕೆ ಭೇಟಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಬಿಜೆಪಿ ಮುಖಂಡರು ಭರವಸೆಗಳನ್ನು ನೀಡಿದ್ದಾರೆಯೇ ಹೊರತು ಇದುವರೆಗೆ ಗ್ರಾಮಕ್ಕೂ ಭೇಟಿ ನೀಡಿಲ್ಲ ಎಂದು ಪನ್ಸುಖಾ ಮಿಲಕ್ ಗ್ರಾಮಸ್ಥರು ಆರೋಪಿಸಿದ್ದಾರೆ.

 “ಪೆಟ್ರೋಲ್ ಪಂಪ್ ನಿರ್ಮಾಣ, ರಸ್ತೆ ಹಾಗೂ ಸ್ಮಾರಕ ನಿರ್ಮಾಣವಲ್ಲದೆ ಗ್ರಾಮದ ಶಾಲೆಗೆ ಸುದೇಶ್ ರ ಹೆಸರನ್ನು ಮರುನಾಮಕರಣಗೊಳಿಸುವುದಾಗಿ ಬಿಜೆಪಿ ನಾಯಕರು ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಒಂದೇ ಒಂದು ಆಶ್ವಾಸನೆಯೂ ಈಡೇರಿಲ್ಲ” ಎಂದು ಸುದೇಶ್ ರ ಸಹೋದರ ಮನೋಜ್ ಕುಮಾರ್ ಹೇಳಿದ್ದಾರೆ.

ಸ್ಥಳೀಯ ನಾಯಕರ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿದ್ದೇವೆ. ಆದ್ದರಿಂದ ಮುಖ್ಯಮಂತ್ರಿ ಆದಿತ್ಯನಾಥ್ ಗ್ರಾಮಕ್ಕೆ ಭೇಟಿ ನೀಡಬೇಕು ಎಂದು ಸುಧೇಶ್ ರ ಇನ್ನೋರ್ವ ಸಹೋದರ ಅನಿಲ್ ಕುಮಾರ್ ಹೇಳಿದ್ದಾರೆ.

ಹುತಾತ್ಮ ಯೋಧನ ಪತ್ನಿ ಕವಿತಾ, ತಾಯಿ ಸಂತೋಷ್ ಕುಮಾರಿ, ತಂದೆ ಬ್ರಹ್ಮಪಾಲ್ ಸಿಂಗ್, ಅನಿಲ್ ಕುಮಾರ್ ಸೇರಿದಂತೆ ಹಲವು ಗ್ರಾಮಸ್ಥರು ಉಪವಾಸ ಧರಣಿ ಆರಂಭಿಸಿದ್ದಾರೆ. ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೇನೆಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸುಧೇಶ್ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News