ಮದುಮಗಳ ಜೀವಕ್ಕೆ ಕುತ್ತಾಗಲಿತ್ತು ಹುಚ್ಚುಸಾಹಸದ ಫೋಟೊಗ್ರಫಿ!
ಚೀನಾ, ಮೇ 19: ಮದುವೆಯ ಸಂಭ್ರಮಕ್ಕೆ ಹೆಚ್ಚು ಕಳೆ ನೀಡುವುದು ಫೋಟೊ ಸೆಶನ್ ಗಳು ಎಂದರೆ ಯಾರು ಒಪ್ಪುವುದಿಲ್ಲ ಹೇಳಿ. ಮದುವೆ ಸಮಾರಂಭದ ನಂತರ ನಡೆಯುವ ಫೋಟೊಗ್ರಫಿಗಳು ಇಂದು ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಭಾರತದಲ್ಲೂ ಸಿನೆಮಾ ಶೈಲಿಯ, ಅದ್ಧೂರಿ ಫೋಟೊಗ್ರಫಿಗಳು ಮದುವೆ ಮನೆಯ ಮುಖ್ಯ ಆಕರ್ಷಣೆಯಾಗುತ್ತಿದೆ. ಆದರೆ, ಇವೆಲ್ಲಕ್ಕಿಂತ ವಿಭಿನ್ನ ಶೈಲಿಯಲ್ಲಿ ಫೋಟೊಗ್ರಫಿ ಮಾಡಹೊರಟ ಮದುಮಗಳೊಬ್ಬಳ ಕಥೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಚೀನಾದಲ್ಲಿ ಈ ಘಟನೆ ನಡೆದಿದ್ದು, ಮದುಮಗಳು ತನ್ನ ಮದುವೆಯ ಫೋಟೊಗ್ರಫಿ ತುಸು ವಿಭಿನ್ನವಾಗಿರಬೇಕು ಎಂದು ಹುಚ್ಚುಸಾಹಸಕ್ಕೆ ಕೈಹಾಕಿದ್ದು, ಕೊನೆಗೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾಳೆ. ಮದುಮಗಳ ಧಿರಿಸಿನ ತುದಿಗೆ ಬೆಂಕಿ ಹಚ್ಚಿದ ಛಾಯಾಗ್ರಾಹಕ ಇನ್ನೇನು ಫೋಟೊ ತೆಗೆಯಬೇಕು ಎನ್ನುವಷ್ಟರಲ್ಲಿ ಪರಿಸ್ಥಿತಿಯ ಚಿತ್ರಣವೇ ಬದಲಾಗಿತ್ತು. ಬೆಂಕಿ ವ್ಯಾಪಕವಾಗಿ ಹಬ್ಬಿದ್ದು, ಇಡೀ ಧರಿಸನ್ನೇ ಆವರಿಸಿದೆ. ಕೊನೆಗೆ ಬೇರೆ ಉಪಾಯವಿಲ್ಲದೆ ಅಗ್ನಿನಿಯಂತ್ರಕದ ಮೂಲಕ ಬೆಂಕಿ ನಂದಿಸಲಾಯಿತು. ಅಲ್ಲಿಗೆ ಫೊಟೊಗ್ರಫಿ ಸೆಶನ್ ಕೂಡ ನಿಂತಿದ್ದು, ಮದುಮಗಳು ಅಪಾಯದಿಂದ ಪಾರಾಗಿದ್ದಾಳೆ.
ಈ ಹುಚ್ಚುಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾರರ ನಗುವಿಗೂ, ಆಕ್ರೋಶಕ್ಕೂ ಕಾರಣವಾಗಿದೆ.