ಜಾಧವ್ ಪ್ರಕರಣದ ಅಸಮರ್ಪಕ ನಿರ್ವಹಣೆ : ಪಾಕ್ ಸರಕಾರಕ್ಕೆ ಕಾನೂನು ತಜ್ಞರ ತರಾಟೆ

Update: 2017-05-19 16:11 GMT

ಇಸ್ಲಮಾಬಾದ್, ಮೇ 19: ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದಲ್ಲಿ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಪ್ರಕರಣವನ್ನು ಅಸಮರ್ಪಕವಾಗಿ ನಿಭಾಯಿಸಿದ ಬಗ್ಗೆ ಪಾಕಿಸ್ತಾನದ ಸರಕಾರವನ್ನು ಹಲವು ಕಾನೂನು ತಜ್ಞರು ತರಾಟೆಗೆತ್ತಿಕೊಂಡಿದ್ದಾರೆ.

ಐಸಿಜೆಯಲ್ಲಿ ಪರಿಣಾಮ ರಹಿತ ತಂತ್ರಗಾರಿಕೆಯ ಕಾರಣ ಪಾಕ್‌ಗೆ ಹಿನ್ನಡೆಯಾಗಿದೆ. ಅಲ್ಲದೆ, ಐಸಿಜೆಯ ತೀರ್ಪನ್ನು ಸರಕಾರ ಒಪ್ಪಿಕೊಳ್ಳಬಾರದಿತ್ತು ಎಂದು ಹಲವೆಡೆಯಿಂದ ಟೀಕೆ ವ್ಯಕ್ತವಾಗಿದ್ದು ಐಸಿಜೆಯಲ್ಲಿ ಸರಕಾರವನ್ನು ಪ್ರತಿನಿಧಿಸಲು ಖವರ್ ಖುರೇಷಿ ಸಮರ್ಥ ವ್ಯಕ್ತಿಯಾಗಿರಲಿಲ್ಲ . ಪಾಕಿಸ್ತಾನದ ಅಟಾರ್ನಿ ಜನರಲ್ ಬೇರೊಬ್ಬ ವಕೀಲರನ್ನು ಸೂಚಿಸಿದ್ದರು. ಆದರೆ ಪಾಕ್ ವಿದೇಶ ವ್ಯವಹಾರ ಕಚೇರಿ ಈ ಆಯ್ಕೆಯಲ್ಲಿ ಎಡವಿದೆ ಎಂದು ಟೀಕಿಸಲಾಗಿದೆ.

ಐಸಿಜೆಯ ಕಡ್ಡಾಯ ನ್ಯಾಯವ್ಯಾಪ್ತಿಯನ್ನು ಒಪ್ಪಿಕೊಳ್ಳುವ 2017ರ ಮಾರ್ಚ್ 29ರ ಘೋಷಣೆಯನ್ನು ಪಾಕಿಸ್ತಾನ ತಕ್ಷಣ ಹಿಂಪಡೆದುಕೊಳ್ಳಬೇಕಿತ್ತು ಎಂದು ಪಾಕ್ ವಕೀಲರ ಮಂಡಳಿಯ ಮಾಜಿ ಉಪಾಧ್ಯಕ್ಷ ಫಾರೂಕ್ ನಸೀಮ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಈ ಪ್ರಕರಣವನ್ನು ಐಸಿಜೆ ಕೊಂಡೊಯ್ದ ತಕ್ಷಣ ಪಾಕಿಸ್ತಾನ ತನ್ನ 2017ರ ಘೋಷಣೆಯನ್ನು ಹಿಂಪಡೆಯಬೇಕಿತ್ತು. ಅದರ ಬದಲು ಸರಕಾರ ಐಸಿಜೆಯಲ್ಲಿ ವಾದ ಮಂಡಿಸಲು ಮುಂದಾಯಿತು ಎಂದು ಅಸಮಾಧಾನ ಸೂಚಿಸಿರುವ ಅವರು, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಪ್ರಶ್ನೆಯನ್ನು ಪಾಕ್ ಸರಕಾರ ಐಸಿಜೆಯಲ್ಲಿ ಯಾಕೆ ಎತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದೇ ಅಭಿಪ್ರಾಯವವನ್ನು ಪಾಕಿಸ್ತಾನದ ಮಾಜಿ ಹೆಚ್ಚುವರಿ ಅಟಾರ್ನಿ ಜನರಲ್, ಅಂತರಾಷ್ಟ್ರೀಯ ಕಾನೂನು ತಜ್ಞ ತಾರಿಕ್ ಖೋಕರ್ ವ್ಯಕ್ತಪಡಿಸಿದ್ದಾರೆ. ಮಧ್ಯಸ್ಥಿಕೆ ವಹಿಸುವ ವೇದಿಕೆಯಾಗಿರುವ ಕಾರಣ ಐಸಿಜೆಯಲ್ಲಿ ವ್ಯಾಜ್ಯ ಹೂಡುವ ಎಲ್ಲಾ ರಾಷ್ಟ್ರಗಳಿಗೂ ತನ್ನ ಆಯ್ಕೆಯ ಓರ್ವ ತಾತ್ಕಾಲಿಕ ನ್ಯಾಯಾಧೀಶರನ್ನು ನಾಮನಿರ್ದೇಶಿಸುವ ಅವಕಾಶವಿದೆ. ಈ ಅವಕಾಶವನ್ನು ಭಾರತ ಬಳಸಿಕೊಂಡಿದೆ. ಆದರೆ ಪಾಕ್ ವಿಫಲವಾಗಿದೆ. ಅಲ್ಲದೆ ತನಗೆ ನಿಗದಿಪಡಿಸಲಾಗಿದ್ದ ಸಮಯವನ್ನು ಸಂಪೂರ್ಣ ಬಳಸಿಕೊಳ್ಳುವಲ್ಲಿಯೂ ಪಾಕ್ ವಕೀಲ ಖವರ್ ಖುರೇಷಿ ವಿಫಲವಾಗಿದ್ದಾರೆ ಎಂದವರು ಟೀಕಿಸಿದರು.

 ಐಸಿಜೆ ಆದೇಶವನ್ನು ಪ್ರತಿಷ್ಠೆಯ ವಿಷಯವನ್ನಾಗಿಸುವ ಬದಲು , ಒಂದೆಡೆ ಕುಳಿತು ಈ ವಿಷಯದ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಖ್ಯಾತ ವಕೀಲೆ ಮತ್ತು ಮಾನವ ಹಕ್ಕು ಕಾರ್ಯಕರ್ತೆ ಆಸ್ಮಾ ಜಹಾಂಗೀರ್ ಅಭಿಪ್ರಾಯಪಟ್ಟಿದ್ದಾರೆ. ನಾವು ನಮ್ಮ ತಂತ್ರವನ್ನು ಬದಲಿಸಿ, ಈ ವಿಷಯವನ್ನು ಭಯೋತ್ಪಾದನೆ ದೃಷ್ಟಿಯಲ್ಲಿ ಬಿಂಬಿಸುವ ಅಗತ್ಯವಿದೆ ಎಂದು ಪಾಕ್‌ನ ಮಾಜಿ ಕಾನೂನು ಸಚಿವ ಎಸ್.ಎಂ. ಝಾಫರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News