ಚಕ್ರವರ್ತಿ ಪದತ್ಯಾಗಕ್ಕೆ ಜಪಾನ್ ಸಂಪುಟ ಅಸ್ತು
Update: 2017-05-19 21:05 IST
ಟೋಕಿಯೊ, ಮೇ 19: ವೃದ್ದರಾಗಿರುವ ಜಪಾನ್ ಚಕ್ರವರ್ತಿಯ ಪದತ್ಯಾಗದ ಮಸೂದೆಗೆ ಜಪಾನ್ ಸರಕಾರ ಇಂದು ಅಂಗೀಕಾರ ನೀಡಿದೆ. ಕಳೆದ ಎರಡು ಶತಮಾನದಲ್ಲಿ ಇದು ಪ್ರಪ್ರಥಮ ಪದತ್ಯಾಗದ ಪ್ರಕರಣವಾಗಿದೆ.
ಪ್ರಧಾನಿ ಶಿಂರೊ ಅಬೆ ನೇತೃತ್ವದಲ್ಲಿ ಸಭೆ ಸೇರಿದ ಸಂಪುಟ ಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದ್ದು ಇದನ್ನು ಸಂಸತ್ತಿನಲ್ಲಿ ಚರ್ಚೆಯ ಬಳಿಕ ಅಂಗೀಕರಿಸಲಾಗುವುದು ಎಂದು ಸಂಪುಟದ ಪ್ರಧಾನ ಕಾರ್ಯದರ್ಶಿ ಯೊಶಿಹಿಡೆ ಸುಗ ತಿಳಿಸಿದ್ದಾರೆ.
83ರ ಹರೆಯದ ಚಕ್ರವರ್ತಿ ಅಖಿಟೊ ವೃದ್ದಾಪ್ಯ ಮತ್ತು ಕಾಯಿಲೆಯಿಂದ ಬಳಲುತ್ತಿರುವ ಕಾರಣ ಅಧಿಕಾರವನ್ನು ಹಿರಿಯ ಪುತ್ರ, ರಾಜಕುಮಾರ ನರುಹಿಟೊಗೆ ಹಸ್ತಾಂತರಿಸಲು ಬಯಸಿದ್ದರು. ಕಳೆದ ಜುಲೈಯಲ್ಲಿ ಪದತ್ಯಾಗದ ಇಂಗಿತವನ್ನು ಅಖಿಟೊ ಘೋಷಿಸಿದ್ದರು. ಆದರೆ ಜಪಾನ್‌ನ ಹಾಲಿ ಕಾನೂನಿನಲ್ಲಿ ಚಕ್ರವರ್ತಿಯ ಪದತ್ಯಾಗಕ್ಕೆ ಅವಕಾಶವಿಲ್ಲ. ಆದ್ದರಿಂದ ಈ ಕುರಿತು ಕಾನೂನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಆದರೆ 2018ರವರೆಗೆ ಪದತ್ಯಾಗ ಸಾಧ್ಯವಿಲ್ಲ ಎನ್ನಲಾಗಿದೆ.