×
Ad

ಭಾರತ-ಸಿಂಗಾಪುರ ನೌಕಾ ಕವಾಯತು ಇತರರಿಗೆ ತೊಂದರೆಯಾಗಬಾರದು: ಚೀನಾ

Update: 2017-05-19 21:33 IST

ಬೀಜಿಂಗ್, ಮೇ 19: ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತ ಮತ್ತು ಸಿಂಗಾಪುರ ದೇಶಗಳು ನಡೆಸಲಿರುವ ನೌಕಾದಳದ ಕವಾಯತು ಇತರ ದೇಶಗಳ ಹಿತಾಸಕ್ತಿಗೆ ಘಾಸಿ ಎಸಗಬಾರದು ಎಂದು ಚೀನಾ ಹೇಳಿದೆ.

ಇಂತಹ ವಿನಿಮಯ ಮತ್ತು ಸಹಕಾರ ಕಾರ್ಯಗಳು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಪೂರಕವಾಗಿದ್ದಲ್ಲಿ ನಮ್ಮ ಆಕ್ಷೇಪವಿಲ್ಲ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರೆ ಹುವ ಚುನ್‌ಯಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ದೇಶಗಳ ಮಧ್ಯೆ ಸಹಜವಾಗಿ ನಡೆಯುವ ವಿನಿಮಯ ಕಾರ್ಯಕ್ರಮಗಳ ಬಗ್ಗೆ ನಾವು ಮುಕ್ತ ಧೋರಣೆ ಹೊಂದಿದ್ದೇವೆ. ಈ ರೀತಿಯ ಪ್ರಕ್ರಿಯೆಯಿಂದ ಇತರ ದೇಶಗಳ ಹಿತಾಸಕ್ತಿಗೆ ತೊಂದರೆಯಾಗಬಾರದು ಎಂಬ ಅಂಶವನ್ನು ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂದರ್ಭ ಇದಕ್ಕೆ ಸಂಬಂಧಿಸಿದವರು ಪರಿಗಣಿಸಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದವರು ಹೇಳಿದರು.

ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತ-ಸಿಂಗಾಪುರ ಜಂಟಿಯಾಗಿ ಹಮ್ಮಿಕೊಂಡಿರುವ ಏಳು ದಿನಗಳ ನೌಕಾ ಸಮರಾಭ್ಯಾಸ ಗುರುವಾರದಿಂದ ಆರಂಭಗೊಂಡಿದೆ. 1994ರಿಂದ ಆರಂಭಗೊಂಡಿರುವ ಈ ಪ್ರಕ್ರಿಯೆಯ 24ನೇ ಭಾಗವಾಗಿರುವ ಈ ಸಮರಾಭ್ಯಾಸದಲ್ಲಿ ಭಾರತೀಯ ನೌಕಾಪಡೆಯ ನಾಲ್ಕು ಸಮರ ನೌಕೆಗಳು, ದೀರ್ಘ ವ್ಯಾಪ್ತಿಯ ಸಬ್‌ಮೆರಿನ್ ನಿರೋಧ ಯುದ್ದವಿಮಾನ ಪಿ-81 ಪಾಲ್ಗೊಂಡಿದೆ. ವಿಯೆಟ್ನಾಂ, ಬ್ರೂನೈ, ಮಲೇಶ್ಯಾ, ಫಿಪಿಪ್ಪೈನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ವಿರೋಧದ ಮಧ್ಯೆಯೂ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯ ಬಹುತೇಕ ಪ್ರದೇಶದ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News