ಆನ್‌ಲೈನ್ ಸೆಕ್ಸ್ ಜಾಲ: ಮ.ಪ್ರ. ಬಿಜೆಪಿ ಮುಖಂಡ ಸಹಿತ 9 ಮಂದಿಯ ಬಂಧನ
ಭೋಪಾಲ್, ಮೇ 19: ನಗರದಲ್ಲಿ ಎರಡು ಬಾಡಿಗೆ ಫ್ಲಾಟ್‌ಗಳಲ್ಲಿ ಆನ್‌ಲೈನ್ ಸೆಕ್ಸ್ ಜಾಲ ನಡೆಸುತ್ತಿದ್ದ ಆರೋಪದಲ್ಲಿ ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿಯ ಓರ್ವ ಮುಖಂಡ ಸೇರಿದಂತೆ 9 ಮಂದಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ ಹಾಗೂ ಜಾಲದಲ್ಲಿ ಸಿಲುಕಿದ್ದ 9 ಮಹಿಳೆಯರನ್ನು ರಕ್ಷಿಸಲಾಗಿದೆ.
ಭೋಪಾಲ್‌ನ ಇ-7 ಅರೆರಾ ಕಾಲನಿಯಲ್ಲಿರುವ ಈ ಎರಡು ಫ್ಲಾಟ್‌ಗಳ ಮೇಲೆ ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿ ಮೂವರು ಗ್ರಾಹಕರು ಸೇರಿದಂತೆ 9 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉದ್ಯೋಗ ಅರಸಿ ಬಂದು, ಸೆಕ್ಸ್ ಜಾಲದಲ್ಲಿ ಸಿಲುಕಿದ್ದ ಮಹಾರಾಷ್ಟ್ರ, ಮೇಘಾಲಯ ಹಾಗೂ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ.
ಬಂಧಿತರನ್ನು ದಿನೇಶ್ ಯಾನೆ ಡೇವಿಡ್ ಸಿಂಗ್, ಸುರೇಶ್ ಗೆಹ್ಲೊಟ್, ರವಿ ಪ್ರಜಾಪತಿ, ಹರ್ಜಿತ್ ಧನ್ವಾನಿ, ಮನೋಜ್ ಕುಮಾರ್ ಗುಪ್ತಾ, ಕೆ.ಕೆ. ಜೈಸ್ವಾಲ್, ಸುರೇಶ್ ಬೆಲಾನಿ, ಮಿಸ್ವಾವುದ್ದೀನ್ ಹಾಗೂ ನೀರಜ್ ಶಾಖ್ಯ ಎಂದು ಗುರುತಿಸಲಾಗಿರುವುದಾಗಿ ಭೋಪಾಲ್‌ನ ಸೈಬರ್‌ಸೆಲ್‌ನ ಪೊಲೀಸ್ ಅಧೀಕ್ಷಕ ಶೈಲೇಂದ್ರ ಚೌಹಾಣ್ ತಿಳಿಸಿದ್ದಾರೆ.
ಆನ್‌ಲೈನ್ ಸೆಕ್ಸ್ ಜಾಲದ ಆರೋಪಿಗಳಲ್ಲೊಬ್ಬನಾದ ನರೇಲಾ ನಿವಾಸಿ ನೀರಜ್ ಶಾಖ್ಯಾ ನನ್ನು ಕೆಲವು ದಿನಗಳ ಹಿಂದೆ ಬಿಜೆಪಿಯ ಪರಿಶಿಷ್ಟ ಜಾತಿ ಘಟಕದ ಮಾಧ್ಯಮ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಬಂಧನದ ಹಿನ್ನೆಲೆಯಲ್ಲಿ ನೀರಜ್ ಅವರನ್ನು ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷ ನಂದಕುಮಾರ್ ಸಿಂಗ್ ಉಚ್ಚಾಟಿಸಿದ್ದಾರೆಂದು ರಾಜ್ಯ ಬಿಜೆಪಿ ವಕ್ತಾರ ದೀಪಕ್ ವಿಜಯವರ್ಗಿಯ ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಚೀನಿ ಸಿಮ್‌ಬಾಕ್ಸ್ ಬಳಸಿಕೊಂಡು ಅಕ್ರಮವಾಗಿ ದೂರವಾಣಿ ಜಾಲವನ್ನು ನಡೆಸಿದ ಆರೋಪದಲ್ಲಿ ಬಿಜೆಪಿ ಐಟಿ ಘಟಕದ ವರಿಷ್ಠ ಧ್ರುವ ಸಕ್ಸೇನಾ ಸೇರಿದಂತೆ, ಆಡಳಿತಾರೂಢ ಬಿಜೆಪಿಯ ಮೂವರು ಮುಖಂಡರನ್ನು ಭೋಪಾಲ್ ಪೊಲೀಸರು ಬಂಧಿಸಿದ್ದರು.