ಮುಸ್ಲಿಂ ಲೇಖಕರ ಸಂಘದ ವತಿಯಿಂದ "ಮುಸ್ಲಿಂ ಸಾಹಿತ್ಯ ಪ್ರಶಸ್ತಿ" ಪ್ರದಾನ

Update: 2017-05-19 18:30 GMT

ಮಂಗಳೂರು, ಮೇ 19: ದಿವಂಗತ ಯು.ಟಿ.ಫರೀದ್ ಸ್ಮರಣಾರ್ಥ ಮುಸ್ಲಿಂ ಲೇಖಕರ ಸಂಘದ ವತಿಯಿಂದ ನಗರದ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ‘ವಾರ್ತಾಭಾರತಿ’ಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್ ಅವರಿಗೆ "ಮುಸ್ಲಿಂ ಸಾಹಿತ್ಯ ಪ್ರಶಸ್ತಿ" ಪ್ರದಾನ ಹಾಗೂ ಹಿರಿಯ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಂಘದ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ.ಖಾದರ್, ಹೊಸದಿಲ್ಲಿಯ ಜೆಎನ್‌ಯು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಡಾ.ಪುರುಷೋತ್ತಮ ಬಿಳಿಮಲೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವಾಗ ಅಲ್ಲಿ ತಾನೇನು ಮಾತನಾಡಬೇಕೆನ್ನುವುದನ್ನು ಇನ್ನೊಬ್ಬರು ನಿರ್ಧರಿಸುವ ವ್ಯವಸ್ಥೆ ನಿರ್ಮಾಣವಾಗಿರುವುದು ವಿಷಾದನೀಯ. ದೇಶದಲ್ಲಿ ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ಥಿತಿ ಸಮಾನವಾಗಿದೆ. ಈ ವರ್ಗದವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಇದ್ದು, ಇದು ಬದಲಾಗಬೇಕು ಎಂದರು.

ಒಂದು ದೇಶವನ್ನು ಪ್ರೀತಿಸುವುದೆಂದರೆ, ಇನ್ನೊಂದು ದೇಶವನ್ನು ದ್ವೇಷಿಸುವುದಲ್ಲ. ಇನ್ನೊಂದು ದೇಶವನ್ನು ದ್ವೇಷಿಸುವ ಮೂಲಕ ನಾನು ನನ್ನ ದೇಶವನ್ನು ಕಟ್ಟಬೇಕೇ? ಎಂಬುದನ್ನು ಅಂದು ರವೀಂದ್ರನಾಥ ಠಾಗೂರ್ ಅವರೇ ಹೇಳಿದ್ದರು ಎಂದು ಡಾ.ಪುರುಷೋತ್ತಮ ಬಿಳಿಮಲೆ ನುಡಿದರು.

ಸಚಿವ ಯು.ಟಿ.ಖಾದರ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಅದರದ್ದೇ ಆದ ಶಕ್ತಿಯಿದ್ದು, ತಾಳ್ಮೆ, ಪ್ರೀತಿ, ವಿಶ್ವಾಸ ಮೂಡಿಸುವಿಕೆ ಇತ್ಯಾದಿಗಳು ಸಾಹಿತ್ಯದಿಂದ ಸಾಧ್ಯ. ಅದನ್ನು ಉತ್ತೇಜಿಸುವ ಕೆಲಸವಾಗಬೇಕು. ಶಿಕ್ಷಕರು ಶಾಲಾ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಮೂಡಿಸುವಂತಾಗಬೇಕು ಎಂದರು.

ಬಿ.ಎಂ.ಬಶೀರ್ ಹಾಗೂ ಬೊಳುವಾರು ಮುಹಮ್ಮದ್ ಕುಂಞಿ ಈ ಸಂದರ್ಭ ಮಾತನಾಡಿದರು. ಮುಸ್ಲಿಂ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಸ್ವಾಗತಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

ಬಿ.ಎಂ.ಬಶೀರ್ ಅವರ ‘ಅಮ್ಮ ಹಚ್ಚಿದ ಒಲೆ’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News