ಮೇ 23: ಜನರ ಸಮಸ್ಯೆ ಪರಿಹಾರಕ್ಕೆ ಮನಪಾ ಫೋನ್ ಇನ್ ಕಾರ್ಯಕ್ರಮ

Update: 2017-05-19 18:38 GMT

ಮಂಗಳೂರು, ಮೇ 19: ಮಂಗಳೂರು ಮಹಾ ನಗರ ಪಾಲಿಕೆಯ ಜನರ ಸಮಸ್ಯೆ ಆಲಿಸಲು ಮನಪಾ ವತಿಯಿಂದ ಮೇ 23ರಂದು ಬೆಳಗ್ಗೆ 10ರಿಂದ 11 ರವರೆಗೆ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

   ಫೋನ್ ಇನ್ ಕಾರ್ಯಕ್ರಮದ ಮೂಲಕ ದೂರು ನೀಡುವವರು ಮೇ 23ರಂದು ದೂ.ಸಂ.: 2220301-318ಕ್ಕೆ ಕರೆ ಮಾಡಬಹುದು. ಈ ಸಂದರ್ಭ ಮನಪಾದ ಎಲ್ಲಾ ಅಧಿಕಾರಿಗಳು ಹಾಜರಿದ್ದು ನಾಗರಿಕರ ಸಮಸ್ಯೆಗಳಿಗೆ ಉತ್ತರಿಸಲಿದ್ದಾರೆ ಎಂದಿದ್ದಾರೆ.

*ಪಾಕೃತಿಕ ವಿಪತ್ತು ನಿರ್ವಹಣೆಗೆ ಮನಪಾ ವತಿಯಿಂದ ಪ್ರತ್ಯೇಕ ತಂಡ: ಮನಪಾ ವತಿಯಿಂದ ಮಳೆಗಾಲದಲ್ಲಿ ಹಾಗೂ ಇತರ ಸಂದರ್ಭದಲ್ಲಿ ಪಾಕೃತಿಕ ವಿಕೋಪಗಳನ್ನು ತಡೆಯಲು 10ಜನ ತರಬೇತಿ ಪಡೆದಿರುವವರ ತಂಡವನ್ನು ರಚಿಸಲಾಗುವುದು. ಈ ತಂಡ ಜೂನ್ 1ರಿಂದ ಕಾರ್ಯಾಚರಿಸಲಿದೆ ಎಂದು ಕವಿತಾ ಸನಿಲ್ ಹೇಳಿದರು.

 ಗುರುಪುರ ನದಿಯ ಮರವೂರು ಕಿಂಡಿ ಅಣೆಕಟ್ಟಿನ ಬಳಿ ನೀರು ಕಲುಷಿತಗೊಳ್ಳಲು ಮನಪಾ ವತಿಯಿಂದ ನಿರ್ಮಾಣವಾಗಿರುವ ಕಾಮಗಾರಿಗಳು ಕಾರಣವಲ್ಲ.ಆದರೂ ಈ ಬಗ್ಗೆ ಮನಪಾ ವತಿಯಿಂದ ನೀರಿನ ಗುಣಮಟ್ಟ ಪರಿಶೀಲಿಸಲಾಗುವುದು ಎಂದು ಕವಿತಾ ಸನಿಲ್ ತಿಳಿಸಿದರು.

 ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮರವೂರಿನ ಕಿಂಡಿ ಅಣೆಕಟ್ಟಿನ ಬಳಿಯ ನೀರಿನಲ್ಲಿ ಆಕ್ಸಿಜನ್ ಕೊರತೆ ಕಂಡು ಬಂದಿರುವುದು ಅಲ್ಲಿನ ಜಲಚರಗಳ ಸಾವಿಗೆ ಕಾರಣವಾಗಿದೆ. ಆದರೆ, ಈ ಪ್ರಮಾಣ ಅಷ್ಟು ಕಡಿಮೆಯಾಗಲು ಏನು ಕಾರಣ ಎನ್ನುವುದನ್ನು ಪತ್ತೆ ಹಚ್ಚಲು ಪರಿಶೀಲನೆ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮನಪಾ ಸದಸ್ಯ ಅಬ್ದುಲ್ ರವೂಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News