ಮಗನನ್ನು ಕಳೆದುಕೊಂಡ ತಂದೆಗೆ ಸಿಗುವುದೇ ನ್ಯಾಯ?

Update: 2017-05-20 10:57 GMT

# ಕೊಲೆಯ ಹಿಂದಿನ ಕೈಗಳ ರಕ್ಷಣೆ: ಆರೋಪ
# ಆಡಳಿತ ಪಕ್ಷದ ಜನಪ್ರತಿನಿಧಿಗೇ ಸಿಗದ ನ್ಯಾಯ!

​ಬಂಟ್ವಾಳ, ಮೇ 19: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕರೋಪಾಡಿ ದುಷ್ಕರ್ಮಿ ಗಳಿಂದ ಬರ್ಬರವಾಗಿ ಹತ್ಯೆಯಾಗಿ ಶನಿವಾರಕ್ಕೆ (ಮೇ 20) ಒಂದು ತಿಂಗಳು ಕಳೆಯಿತು. ಮಗನ ಅಕಾಲಿಕ ಮರಣದಿಂದ ನೊಂದಿರುವ ಜಲೀಲ್‌ರ ತಂದೆ ಬಂಟ್ವಾಳ ತಾಪಂ ಸದಸ್ಯ ಉಸ್ಮಾನ್ ಹಾಜಿ ಕರೋಪಾಡಿ ನಿತ್ಯವೂ ಕೊರ

ಗುತ್ತಿದ್ದಾರೆ. ನನ್ನ ಮಗನ ಹತ್ಯೆಯ ಹಿಂದಿರುವವರನ್ನು ಬಂಧಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿ ಎಂದವರು ಸರಕಾರವನ್ನು ಆಗ್ರಹಿಸುತ್ತಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಆಡಳಿತ ಪಕ್ಷದ ಜನಪ್ರತಿನಿಧಿಯಾಗಿದ್ದ ಜಲೀಲ್‌ರ ಸಾವಿಗೆ ನ್ಯಾಯ ಒದಗಿಸುವವರು ಯಾರು? ಈ ಪ್ರಶ್ನೆ ಸಾರ್ವಜನಿಕರದ್ದಾಗಿದೆ. 

ದುಷ್ಕರ್ಮಿಗಳ ತಂಡವು ಎ.20ರಂದು ಹಾಡಹಗಲೇ ಕರೋಪಾಡಿ ಗ್ರಾಪಂ ಕಚೇರಿಯೊಳಗೆ ನುಗ್ಗಿ ಜಲೀಲ್‌ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿತ್ತು. ಆರಂಭದಲ್ಲಿ ಗಾಂಜಾ ಮಾಫಿಯಾ, ಮರಳು ಮಾಫಿಯಾ, ನಿಧಿ ಮಾಫಿಯಾದ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದ್ದರೂ ಇದು ಅಧಿಕಾರ ಸಿಗದ ದ್ವೇಷದಿಂದ ಹಿತಶತ್ರುಗಳ ಕುಮ್ಮಕ್ಕಿನಿಂದಲೇ ನಡೆದ ಕೃತ್ಯ ಎಂಬ ಆರೋಪ ಈಗ ವ್ಯಾಪಕವಾಗಿ ಕೇಳಿಬಂದಿದೆ.

ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಹಾಗೂ ಹಂತಕರಿಗೆ ಸಹಕರಿಸಿದ 11 ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಆರೋಪಿಗಳೆಲ್ಲರೂ ಹಿಂದೂ ಜಾಗರಣ ವೇದಿಕೆಯ ಮುಖಂಡರು ಮತ್ತು ಕಾರ್ಯಕರ್ತರೆನ್ನಲಾಗಿದೆ. ಆದರೆ, ಹತ್ಯೆಯ ಹಿಂದಿನ ರೂವಾರಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿಲ್ಲ ಹಾಗೂ ಈ ರೂವಾರಿಗಳನ್ನು ಜಿಲ್ಲೆಯ ಕಾಂಗ್ರೆಸ್ ಮುಖಂಡರು ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಕೇಳಿಬರುತ್ತಿದೆ. ಮೃತ ಜಲೀಲ್‌ರ ತಂದೆ ಕೂಡಾ ತನ್ನ ಮಗನ ಹತ್ಯೆ ಕಾಂಗ್ರೆಸ್ ಬೆಂಬಲಿತ ಕರೋಪಾಡಿ ಗ್ರಾಪಂ ಸದಸ್ಯ ದಿನೇಶ್ ಶೆಟ್ಟಿ ಮತ್ತು ಆತನ ಆಪ್ತರಿಂದ ನಡೆದಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.

‘‘ಬಜರಂಗದಳ ಮತ್ತು ಹಿಂಜಾವೇ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ದಿನೇಶ್ ಶೆಟ್ಟಿ ಗ್ರಾಪಂ ಉಪಾಧ್ಯಕ್ಷ ಸ್ಥಾನ ಸಿಗದ ಕಾರಣ ಹಾಗೂ ಜಲೀಲ್ ರಾಜಕೀಯವಾಗಿ ಬೆಳೆಯುತ್ತಿರುವುದನ್ನು ಸಹಿಸದೆ ಕೊಲೆ ನಡೆಸಲು ಹಿಂಜಾವೇ ಕಾರ್ಯಕರ್ತರಿಗೆ ಸುಪಾರಿ ನೀಡಿದ್ದಾನೆ. ಈ ಬಗ್ಗೆ ಐಜಿಪಿ ಮತ್ತು ಎಡಿಜಿಪಿ ಕೂಡಾ ನನಗೆ ತಿಳಿಸಿದ್ದಾರೆ. ಆದರೆ, ತಿಂಗಳು ಕಳೆದರೂ ದಿನೇಶ್ ಶೆಟ್ಟಿ ಮತ್ತು ಆತನ ಆಪ್ತರ ಬಂಧನವಾಗಿಲ್ಲ’’ ಎಂದು ಉಸ್ಮಾನ್ ಕರೋಪಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹತ್ಯೆಯ ಹಿಂದಿರುವ ರೂವಾರಿಗಳ ಬಂಧನವಾಗದ ಬಗ್ಗೆ ಇತ್ತೀಚೆಗೆ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಗನನ್ನು ನೆನೆದು ಭಾವುಕರಾಗಿದ್ದ ಉಸ್ಮಾನ್ ಕರೋಪಾಡಿ, ಮನೆಗೆ ಭೇಟಿ ನೀಡಿದ್ದ ಗೃಹ ಸಚಿವ ಪರಮೇಶ್ವರ್ ಸಹಿತ ಇತರ ನಾಯಕರ ಮುಂದೆಯೂ ಕಣ್ಣೀರು ಸುರಿಸಿದ್ದರು.

ಮೇ 14ರಂದು ಮಹಾತ್ಮ ಗಾಂಧಿ ಶಾಂತಿ ಸೌಹಾರ್ದ ವೇದಿಕೆಯಿಂದ ಬಿ.ಸಿ.ರೋಡ್‌ನ ಲಯನ್ಸ್ ಕ್ಲಬ್‌ನಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲೂ ಉಸ್ಮಾನ್ ಕರೋಪಾಡಿ ದುಃಖ ತಡೆಯಲಾಗದೆ ಅತ್ತುಬಿಟ್ಟಿದ್ದರು.

ದಿನೇಶ್ ಶೆಟ್ಟಿ ಮತ್ತಾತನ ಸಹಚರರನ್ನು ಬಂಧಿಸುವಂತೆ ಸಚಿವರಾದ ಪರಮೇಶ್ವರ್, ಬಿ.ರಮಾನಾಥ ರೈ, ಯು.ಟಿ.ಖಾದರ್, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರನ್ನು ಆಗ್ರಹಿಸಿದ್ದಾರೆ. ಆದರೆ ಈವರೆಗೆ ಪ್ರಯೋಜನವಾಗಿಲ್ಲ. ಉಸ್ಮಾನ್ ಕರೋಪಾಡಿ ದಶಕಗಳಿಂದ ಪ್ರತಿನಿಧಿಸುತ್ತಿರುವ, ಸೇವೆ ಸಲ್ಲಿಸುತ್ತಿರುವ ಪಕ್ಷ ಅಧಿಕಾರದಲ್ಲಿದ್ದರೂ ಅವರ ಆಗ್ರಹ, ಬೇಡಿಕೆ, ಕಣ್ಣೀರಿಗೆ ಬೆಲೆ ಸಿಕ್ಕಿಲ್ಲ.

*ಬೈಕ್, ಮಾರಕಾಸ್ತ್ರ ಪತ್ತೆ ಬಗ್ಗೆ ತನಿಖೆಯಾಗಿಲ್ಲ

ಮೇ 25ರಂದು ಕರೋಪಾಡಿ ಗ್ರಾಮದ ಪೊದೆಯೊಂದರಲ್ಲಿ ಎರಡು ಪಲ್ಸರ್ ಬೈಕ್, ಎರಡು ತಲವಾರು ಹಾಗೂ ಬಟ್ಟೆಗಳು ಪತ್ತೆಯಾಗಿದ್ದವು. ಇದು ಜಲೀಲ್ ಹತ್ಯೆ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಎಂಬ ಆರೋಪ ಕೇಳಿಬಂದಿತ್ತು. ಬೈಕ್, ತಲವಾರು, ಬಟ್ಟೆಯನ್ನು ವಶಕ್ಕೆ ಪಡೆದ ಪೊಲೀಸರು ಅನಾಥ ಸೊತ್ತುಗಳು ಪತ್ತೆ ಕಾಲಂನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಗಂಭೀರವಾದ ಈ ಪ್ರಕರಣವನ್ನು ಪೊಲೀಸರು ಇನ್ನೂ ಭೇದಿಸಿಲ್ಲ.

ಪತ್ತೆಯಾದ ಬೈಕ್‌ನಲ್ಲಿ 1 ಬೈಕ್ ಕನ್ಯಾನದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ. ಕನ್ಯಾನದ ಹೊಟೇಲ್ ಒಂದರ ಪಕ್ಕದಲ್ಲಿ ನಿಲ್ಲಿಸಿದ್ದ ಆ ಬೈಕನ್ನು ಯಾರೋ ಕಳ್ಳತನ ಮಾಡಿದ್ದಾರೆ, ಇನ್ನೊಂದು ಬೈಕ್ ಯಾರಿಗೆ ಸೇರಿದ್ದು? ಬೈಕ್, ತಲವಾರು, ಬಟ್ಟೆಗಳನ್ನು ತಂದು ಇಟ್ಟವರು ಯಾರು? ಈ ಬಗ್ಗೆ ನಡೆದ ತನಿಖೆಯ ಪ್ರಗತಿ ಏನು ಎಂಬ ಪ್ರಶ್ನೆಗೆ ಪೊಲೀಸರಿಂದ ಯಾವುದೇ ಉತ್ತರಗಳು ಸಿಕ್ಕಿಲ್ಲ. ಜಲೀಲ್ ಕೊಲೆಗೂ ಈ ಪ್ರಕರಣಕ್ಕೂ ನಿಕಟ ನಂಟಿದೆ ಎನ್ನಲಾಗುತ್ತಿದೆ. ಆದರೆ ಈ ಪ್ರಕರಣದ ಬಗ್ಗೆ ಪೊಲೀಸರ ನಿರ್ಲಕ್ಷ ಹಲವು ಸಂಶಯವನ್ನು ಹುಟ್ಟು ಹಾಕಿದೆ.

*ಡಿಸಿಐಬಿ ಮತ್ತೆ ಎಂಟ್ರಿ?
ಜಲೀಲ್ ಹಂತಕರ ಪತ್ತೆಗೆ ರಚಿಸಲಾಗಿದ್ದ ಐದು ವಿಶೇಷ ಪೊಲೀಸ್ ತಂಡ ಆರಂಭದಲ್ಲಿ ಕಳ್ಳತನ ಪ್ರಕರಣವೊಂದರ ಐವರು ಆರೋಪಿಗಳನ್ನು ಈ ಪ್ರಕರಣದಲ್ಲಿ ಫಿಕ್ಸೃ್ ಮಾಡಿತ್ತು ಎನ್ನಲಾಗಿದೆ. ಇದು ತನಿಖಾ ತಂಡದ ನಡುವೆಯೇ ಮುನಿಸಿಗೆ ಕಾರಣವಾಗಿತ್ತು.

ಫಿಕ್ಸಿಂಗ್‌ನಿಂದ ಅಸಮಾಧಾನಗೊಂಡ ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಐಬಿ)ದ ಪೊಲೀಸರು ತನಿಖೆಯಿಂದ ಹಿಂದೆ ಸರಿದಿದ್ದರು. ಆ ಬಳಿಕ ಪೊಲೀಸರ ಫಿಕ್ಸಿಂಗ್ ತಂತ್ರಕ್ಕೆ ಹೊಡೆತ ಬಿದ್ದಿತ್ತು. ಮೇ 27ರಂದು ಜಲೀಲ್ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಗೆ ಮುತ್ತಿಗೆ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಂತಕರ ಬಂಧನವಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಜಲೀಲ್ ಮನೆಯಿಂದ ನೇರವಾಗಿ ಬಂಟ್ವಾಳ ಪ್ರವಾಸಿ ಮಂದಿರಕ್ಕೆ ತೆರಳಿದ ಸಚಿವ ರಮಾನಾಥ ರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆಯವರನ್ನು ಕರೆಸಿ ಹಂತಕರನ್ನು ಕೂಡಲೇ ಬಂಧಿಸುವಂತೆ ಆದೇಶಿಸಿದ್ದರು. ಆ ಬಳಿಕ ಎಚ್ಚರಗೊಂಡ ಪೊಲೀಸರು ನೈಜ ಹಂತಕರನ್ನು ಬಂಧಿಸುವ ಕಾರ್ಯಾಚರಣೆಗೆ ಮುಂದಾಗಿದ್ದರು. ಎಸ್ಪಿಯ ಸೂಚನೆಯ ಮೇರೆಗೆ ಡಿಸಿಐಬಿ 11 ಮಂದಿ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ವಾರದೊಳಗೆ ಕೊಲೆ ನಡೆಯುತ್ತೆ ಎಂದಿದ್ದ ಪೊಲೀಸ್? 

(ವಿಟ್ಲ ಠಾಣೆಯ ಕಾನ್ ಸ್ಟೇಬಲ್ ಪ್ರವೀಣ್ ರೈ ಮತ್ತು ಪ್ರದೀಪ್ ಶೆಟ್ಟಿ,ವಿನೋದ್ ಶೆಟ್ಟಿ, ಸತೀಶ್ ಶೆಟ್ಟಿ ಪಟ್ಲ ಪೊಲೀಸ್ ಠಾಣೆ ಎದುರು ತೆಗೆದ ಗ್ರೂಪ್ ಫೋಟೊ)

ಜಲೀಲ್ ಕೊಲೆ ನಡೆಯುವ ಒಂದು ವಾರದ ಮೊದಲು ವಿಟ್ಲ ಪೊಲೀಸ್ ಠಾಣೆಯ ಪಿಸಿ ಪ್ರವೀಣ್ ರೈ, ‘‘ಈ ವಾರದಲ್ಲಿ ಈ ಭಾಗದಲ್ಲೊಂದು ಕೊಲೆ ನಡೆಯುತ್ತದೆ’’ ಎಂದು ಕೆಲವರಲ್ಲಿ ಹೇಳಿದ್ದರು ಎಂಬ ಮಾತು ಇದೀಗ ಕೇಳಿಬರುತ್ತಿದೆ.

ಜಲೀಲ್ ಕೊಲೆ ಪ್ರಕರಣದ ಹಿಂದಿದ್ದಾರೆ ಎಂದು ಉಸ್ಮಾನ್ ಆರೋಪಿಸಿರುವ ದಿನೇಶ್ ಶೆಟ್ಟಿ, ಫೈನಾನ್ಸ್ ಮಾಲಕ ಪ್ರದೀಪ್ ಶೆಟ್ಟಿ, ವಿನೋದ್ ಶೆಟ್ಟಿಯ ಆಪ್ತರಲ್ಲಿ ಗುರುತಿಸಿಕೊಂಡಿರುವ ಪ್ರವೀಣ್ ರೈಯನ್ನು ಘಟನೆಯ ಬಳಿಕ ಉಪ್ಪಿನಂಗಡಿ ಠಾಣೆಗೆ ವರ್ಗಾಯಿಸಲಾಗಿದೆ. ಮೃತ ಜಲೀಲ್‌ರ ತಂದೆ ಉಸ್ಮಾನ್ ಹಾಜಿ ಕೂಡಾ ಪ್ರಕರಣಕ್ಕೆ ಸಂಬಂಧಿಸಿ ಕಾನ್‌ಸ್ಟೇಬಲ್ ಪ್ರವೀಣ್ ರೈಯನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದ್ದರು.

# ಕೊಲೆಗೆ ಸಂಬಂಧಿಸಿ ಉಸ್ಮಾನ್ ಕರೋಪಾಡಿ ‘ವಾರ್ತಾಭಾರತಿ’ಗೆ ತಿಳಿಸಿದ ಮಾಹಿತಿ ಇಲ್ಲಿದೆ

ದಿನೇಶ್ ಶೆಟ್ಟಿ 2015ರಲ್ಲಿ ಮೊದಲ ಬಾರಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ. ಈತ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಚಿಕ್ಕಪ್ಪನ ಮಗ. ವಾಸ್ತವದಲ್ಲಿ ದಿನೇಶ್ ಶೆಟ್ಟಿ ಕರೋಪಾಡಿ ಗ್ರಾಮದ 5ನೆ ವಾರ್ಡ್‌ನವನಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯ ಶಿಫಾರಸಿನ ಮೇರೆಗೆ ಮುಸ್ಲಿಮ್ ಮತಗಳೇ ಅಧಿಕ ಸಂಖ್ಯೆಯಲ್ಲಿರುವ 6ನೆ ಒಡಿಯೂರು ವಾರ್ಡ್ ನಲ್ಲಿ ಗ್ರಾಪಂ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. 6ನೆ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಬೇಕಿದ್ದ ಮೂಸಬ್ಬ ಎಂಬವರನ್ನು 5ನೆ ವಾರ್ಡ್‌ನಲ್ಲಿ ಚುನಾವಣೆಗೆ ನಿಲ್ಲಿಸಲಾಗಿತ್ತು.

5ನೆ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಾಗಿ ಗೆಲುವು ಸಾಧಿಸುತ್ತಾರೆ. ಹಾಗಾಗಿ ಮೂಸಬ್ಬ ಸೋತಿದ್ದರು. ಜಲೀಲ್ ತನ್ನ ಮನೆಯಿರುವ 1ನೆ ಮಿತ್ತನಡ್ಕ ವಾರ್ಡ್‌ನಲ್ಲಿ ನಿಂತು ಭರ್ಜರಿ ಗೆಲುವು ಸಾಧಿಸಿದ್ದರು ಎಂದು ಉಸ್ಮಾನ್ ಹೇಳಿದ್ದಾರೆ.

 2010ರಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಜಲೀಲ್ ಮೊದಲ ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಐದು ವರ್ಷಗಳ ಅವಧಿಯಲ್ಲಿ ಮೊದಲ ಅವಧಿಗೆ ಉಪಾಧ್ಯಕ್ಷರಾದ ಜಲೀಲ್ ಎರಡನೆ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2015ರಲ್ಲಿ ನಡೆದ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದ ಜಲೀಲ್ ಮೀಸಲಾತಿಯ ಹಿನ್ನೆಲೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಬೇಬಿ ಆರ್. ಶೆಟ್ಟಿ ಆಯ್ಕೆಯಾಗಿದ್ದರು.

ಈ ಅವಧಿಯಲ್ಲಿ ಮೊದಲ ಬಾರಿಗೆ ಗ್ರಾಪಂ ಸದಸ್ಯನಾಗಿ ಆಯ್ಕೆಯಾದ ದಿನೇಶ್ ಶೆಟ್ಟಿ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ. ಆದರೆ ಜಿಲ್ಲಾ ಹೈಕಮಾಂಡ್‌ನ ಸೂಚನೆಯಂತೆ ಅಧ್ಯಕ್ಷೆ ಸ್ಥಾನಕ್ಕೆ ಬೇಬಿ ಆರ್. ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಲೀಲ್ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿತ್ತು. ಈ ನಡುವೆ ದಿನೇಶ್ ಶೆಟ್ಟಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕೆಂದು ತನ್ನ ಮೊಬೈಲ್ ಫೋನ್‌ಗೆ ವಿಕ್ಕಿ ಶೆಟ್ಟಿ ಎಂಬ ಹೆಸರು ಹೇಳಿ ಬೆದರಿಕೆ ಕರೆಗಳು ಬಂದಿದ್ದವು. ಇದನ್ನು ಪಕ್ಷದ ಜಿಲ್ಲಾ ನಾಯಕರ ಗಮನಕ್ಕೆ ತಂದಿದ್ದೆ ಎಂದು ಉಸ್ಮಾನ್ ಕರೋಪಾಡಿ ಹೇಳುತ್ತಾರೆ.

2015ರ ಆ.29ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗಲೂ ವಿಕ್ಕಿ ಶೆಟ್ಟಿ ಎಂದು ಹೇಳಿ ಒಂದೇ ನಂಬ್ರದಿಂದ ಸುಮಾರು 15ಕ್ಕೂ ಅಧಿಕ ದೂರವಾಣಿ ಕರೆಗಳು ಬಂದಿತ್ತು. ಆಗ ನಾನು ಮೊಬೈಲ್‌ಫೋನ್ ದಿನೇಶ್ ಶೆಟ್ಟಿಗೆ ಕೊಟ್ಟೆ. ಆತ ಕೆಲವು ನಿಮಿಷ ಮಾತನಾಡಿ ಮಿಥುನ್ ರೈಗೆ ಕೊಟ್ಟ. ಬಳಿಕ ಮಿಥುನ್ ರೈ ಹಾಗೂ ಚಂದ್ರಪ್ರಕಾಶ್ ಶೆಟ್ಟಿ ತನ್ನಲ್ಲಿ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಪೊಲೀಸ್ ದೂರು ನೀಡಲು ಹೋಗಬೇಡಿ ಎಂದಿದ್ದರು. ಅವರ ಮಾತಿನಂತೆ ನಾನು ಯಾವುದೇ ದೂರು ನೀಡಿಲ್ಲ ಎಂದು ಉಸ್ಮಾನ್ ಕರೋಪಾಡಿ ಹಳೆಯ ಘಟನೆಯನ್ನು ನೆನಪಿಸುತ್ತಾರೆ.

ಅಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಬೇಬಿ ಆರ್. ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಜಲೀಲ್ ಆಯ್ಕೆಯಾಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಹಾರೈಸುವ ಪದ್ಧತಿ ಎಲ್ಲ ಕಡೆ ಇದೆ. ಅದಕ್ಕೆ ಪಕ್ಷ ಭೇದವಿಲ್ಲ. ಆದರೆ ಮಿಥುನ್ ರೈ, ಚಂದ್ರಪ್ರಕಾಶ್ ಶೆಟ್ಟಿ, ಅಬ್ಬಾಸ್ ಅಲಿ ಹಾಗೂ ಇತರರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಹಾರೈಸದೆ ನೇರ ಹೊರಟು ಹೋಗಿದ್ದರು. ಬಳಿಕ ದಿನೇಶ್ ಶೆಟ್ಟಿಯ ಆಪ್ತರಲ್ಲಿ ಗುರುತಿಸಿರುವ ಅದ್ರಮ ಬ್ಯಾರಿಯ ಮನೆಯಲ್ಲಿ ಚರ್ಚೆ ನಡೆಸಿದ ಮಾಹಿತಿ ಅಂದು ರಾತ್ರಿ ನನಗೆ ತಿಳಿದುಬಂತು.

ವಿಟ್ಲದ ಬಜರಂಗದಳದ ಪ್ರಮುಖ ಪ್ರದೀಪ್ ಶೆಟ್ಟಿ ಸಹಿತ ಸಂಘಪರಿವಾರದ ಹಲವರೊಂದಿಗೆ ದಿನೇಶ್ ಶೆಟ್ಟಿ ಒಡನಾಟ ಇಟ್ಟುಕೊಂಡಿದ್ದ. ಅವರ ಕಾರಿನಲ್ಲೇ ಸುತ್ತಾಡುತ್ತಿದ್ದ. ಮರಳುಗಾರಿಕೆಗೆ ಅನುಮತಿ ನೀಡದ ಕಾರಣ ಕೆಲವು ತಿಂಗಳ ಹಿಂದೆ ಪ್ರದೀಪ್ ಶೆಟ್ಟಿ ಮತ್ತು ಆತನ ಸಹಚರರು ಗ್ರಾಪಂ ಕಚೇರಿಗೆ ಬಂದು ಜಲೀಲ್‌ನ ಅಂಗಿಯ ಕಾಲರ್ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ಕೂಡಾ ದಾಖಲಾಗಿದೆ. ಉಪಾಧ್ಯಕ್ಷ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲು ದಿನೇಶ್ ಶೆಟ್ಟಿ ಬಹಿರಂಗವಾಗಿಯೇ ಕೆಲಸ ಮಾಡಿದ್ದ ಎಂದು ಉಸ್ಮಾನ್ ಕರೋಪಾಡಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News