ಇರಾನ್ ಅಧ್ಯಕ್ಷರಾಗಿ ಹಸನ್ ರೂಹಾನಿ ಮರು ಆಯ್ಕೆ

Update: 2017-05-20 12:51 GMT

ಟೆಹ್ರಾನ್, ಮೇ 20: ವಿದೇಶಗಳೊಂದಿಗಿನ ಸಂಬಂಧ ಸುಧಾರಣೆಗೆ ನಡೆಸಿದ ಪ್ರಯತ್ನಗಳನ್ನು ಮತದಾರರು ಬೆಂಬಲಿಸುವುದರೊಂದಿಗೆ ಹಸನ್ ರೂಹಾನಿ ಇರಾನ್ ಅ್ಯಕ್ಷರಾಗಿ ಮರು ಆಯ್ಕೆಗೊಂಡಿದ್ದಾರೆ.

 ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಎಣಿಕೆಯಾದ 38.9 ಮಿಲಿಯನ್ ಮತಗಳಲ್ಲಿ ರೂಹಾನಿ 22.8 ಮಿಲಿಯನ್ ಮತಗಳನ್ನು ಪಡೆದರೆ, ನಿಕಟ ಸವಾಲೊಡ್ಡಿದ್ದ ತೀವ್ರವಾದಿ ಇಬ್ರಾಹಿಂ ರೈಸಿ 15.5 ಮಿಲಿಯನ್ ಮತ ಪಡೆದರು. ಇನ್ನೂ ಹಲವು ಮತಗಳನ್ನು ಎಣಿಸಲು ಬಾಕಿಯಿದ್ದು ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿರುವ ರೂಹಾನಿಯವರನ್ನು ಇರಾನ್‌ನ ರಾಷ್ಟ್ರೀಯ ಟಿ.ವಿ.ವಾಹಿನಿ ಅಭಿನಂದಿಸಿದೆ.

  ವಿವೇಕ ಮತ್ತು ವಿಶ್ವಾಸದ ಪಥದಲ್ಲಿ ಮುಂದುವರಿದು ಬೃಹತ್ ಮತ್ತು ಸ್ಮರಣಾರ್ಹ ಸಾಧನೆ ಮಾಡುವ ನಿಟ್ಟಿನಲ್ಲಿ ಇರಾನ್ ದೇಶಕ್ಕೆ ದೊರೆತ ಅಸಾಧಾರಣ ಗೆಲುವಿಗೆ ಅಭಿನಂದನೆಗಳು ಎಂದು ಉಪಾಧ್ಯಕ್ಷ ಎಶಾಖ್ ಜಹಂಗಿರಿ , ಸರಕಾರದ ಧ್ಯೇಯವಾಕ್ಯ ವನ್ನು ಉದ್ದರಿಸಿ ಟ್ವೀಟ್ ಮಾಡಿದ್ದಾರೆ.

    ಇರಾನ್ ಮತ್ತು ವಿಶ್ವದ ಶಕ್ತರಾಷ್ಟ್ರಗಳ ನಡುವೆ 2015ರಲ್ಲಿ ಏರ್ಪಟ್ಟ ಪರಮಾಣು ಒಪ್ಪಂದದ ರೂವಾರಿಯಾಗಿರುವ 68ರ ಹರೆಯದ ಸುಧಾರಣಾವಾದಿ ಧರ್ಮಗುರು ರೂಹಾನಿ ಈ ಚುನಾವಣೆ ತೀವ್ರವಾದತ್ವ ಮತ್ತು ಅಧಿಕ ಪೌರ ಸ್ವಾತಂತ್ರದ ನಡುವಿನ ಆಯ್ಕೆಯಾಗಿದೆ ಎಂದು ಬಣ್ಣಿಸಿದ್ದರು. ಮೂಲಭೂತ ಬದಲಾವಣೆ ಮತ್ತು ಸರ್ವರಿಗೂ ಸಮಾನವಕಾಶ ಕಲ್ಪಿಸುವ ಘೋಷಣೆಯ ಬಗ್ಗೆ ಇರಾನ್ ಜನತೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದವರು ನಂಬಿಕೆ ಹೊಂದಿಲ್ಲ ಎಂಬುದನ್ನು ರೂಹಾನಿ ಪಡೆದಿರುವ ಮತಗಳು ಸ್ಪಷ್ಟಪಡಿಸಿವೆ ಎಂದು ಇರಾನ್‌ನ ಚಿಂತಕ ಆಲಿ ವಯಿಝ್ ಹೇಳಿದ್ದಾರೆ.

ತಮ್ಮ ದೇಶ ಎದುರಿಸುತ್ತಿರುವ ಬಿಕ್ಕಟ್ಟಿಗೆ ಅರ್ಥವ್ಯವಸ್ಥೆಯ ಸೂಕ್ತ ನಿರ್ವಹಣೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುವುದೇ ಸರಿಯಾದ ಮಾರ್ಗ ಎಂದು ತಿಳಿದುಕೊಳ್ಳುವಷ್ಟು ಮತದಾರರು ಪ್ರಬುದ್ಧರಾಗಿದ್ದರು ಎಂದು ವಯಿಝ್ ಹೇಳಿದ್ದಾರೆ.

    ಅಮೆರಿಕ ನೇತೃತ್ವದ ಆರು ಶಕ್ತ ರಾಷ್ಟ್ರಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ದೇಶದ ಮೇಲೆ ವಿಧಿಸಲಾಗಿದ್ದ ಆರ್ಥಿಕ ನಿಷೇಧ ತೆರವುಗೊಳಿಸಿರುವುದು ಈ ಹಿಂದಿನ ಅಧ್ಯಕ್ಷಾವಧಿಯಲ್ಲಿ ರೂಹಾನಿ ಅವರ ಸಾಧನೆಯಾಗಿದೆ. ಪರಮಾಣು ಸಂಬಂಧಿತ ನಿಷೇಧವನ್ನು ಕೈಬಿಡುವ ನಿರ್ಧಾರವನ್ನು ಮುಂದುವರಿಸಿಕೊಂಡು ಹೋಗುವುದಾಗಿ ಟ್ರಂಪ್ ಆಡಳಿತ ಈ ವಾರ ಘೋಷಿಸಿರುವುದು ರೂಹಾನಿ ಅವರ ಗೆಲುವಿನ ಅಕಾಶವನ್ನು ಹೆಚ್ಚಿಸಿತು ಎನ್ನಲಾಗಿದೆ.

   ತನ್ನನ್ನು ಬಡಜನರ ಪರ ಎಂದು ಸಮರ್ಥಿಸಿಕೊಳ್ಳುತ್ತಿದ್ದ ತೀವ್ರವಾದಿ ಧರ್ಮಗುರು, 56ರ ಹರೆಯದ ರೈಸಿ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಇನ್ನಷ್ಟು ಕಠಿಣ ನಿಲುವು ತಳೆಯಬೇಕೆಂದು ಪ್ರತಿಪಾದಿಸಿದ್ದರು. ಆದರೆ ಅವರ ಕ್ರಾಂತಿಕಾರಿ ಶೈಲಿಯ ಮಾತುಗಾರಿಕೆ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಭರವಸೆಯ ಮೂಲಕ ದುಡಿಯುವ ವರ್ಗದ ಜನರ ವಿಶ್ವಾಸ ಗಳಿಸುವ ಪ್ರಯತ್ನ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ ಎಂದು ವಿಶ್ಲೇಷಿಸಲಾಗಿದೆ.

     ನ್ಯಾಯಾಂಗ ಮತ್ತು ಭದ್ರತಾ ಸೇವೆಗಳಲ್ಲಿ ಮೇಲುಗೈ ಹೊಂದಿರುವ ಸಂಪ್ರದಾಯವಾದಿಗಳ ತೀವ್ರ ವಿರೋಧದ ಮಧ್ಯೆಯೂ ಈಗ ಇನ್ನಷ್ಟು ಮುಕ್ತ ಚಿಂತನೆಯತ್ತ ಸಾಗಲು ಈ ಗೆಲುವು ರೂಹಾನಿಗೆ ಅವಕಾಶ ನೀಡಿದೆ ಎಂದು ಟೆಹ್ರಾನ್ ವಿವಿಯಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಸಂಶೋಧಕರಾಗಿರುವ ಫೋದ್ ಇಝಾದಿ ಹೇಳಿದ್ದಾರೆ. 2009ರ ಪ್ರತಿಭಟನೆಯ ಬಳಿಕ ಹಲವು ವರ್ಷಗಳೇ ಸಂದಿದ್ದು ದೇಶವು ಹೆಚ್ಚಿನ ಸ್ಥಿರತೆಯನ್ನು ರುಜುವಾತುಪಡಿಸಿದೆ. ಇದು ವ್ಯವಸ್ಥೆಗೆ ವಿಶ್ವಾಸವನ್ನು ತುಂಬುವ ಮೂಲಕ ಹೆಚ್ಚಿನ ಬದಲಾವಣೆಗೆ ದಾರಿ ಮಾಡಿಕೊಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

  ಆದರೆ ದೇಶದ ಅರ್ಥವ್ಯವಸ್ಥೆ ಬಹುದೊಡ್ಡ ಸವಾಲಾಗಿದೆ. ರೂಹಾನಿ 2013ರಲ್ಲಿ ಅಧಿಕಾರ ವಹಿಸಿಕೊಂಡಾಗ ಶೇ.40ರಷ್ಟಿದ್ದ ಹಣದುಬ್ಬರ ಪ್ರಮಾಣ ಈಗ ಇಳಿಮುಖವಾಗಿದೆ. ಆದರೆ ದೇಶದಲ್ಲಿ ವಸ್ತುಗಳ ದರ ವರ್ಷಕ್ಕೆ ಶೇ.9ರ ಪ್ರಮಾಣದಲ್ಲಿ ವೃದ್ಧಿಯಾಗುತ್ತಿದೆ. ಕಳೆದ ಜನವರಿಯಲ್ಲಿ ಪರಮಾಣು ಒಪ್ಪಂದ ಅನುಷ್ಠಾನಗೊಂಡ ಬಳಿಕ ತೈಲ ಮಾರಾಟ ಚೇತರಿಸಿಕೊಂಡಿದೆ. ಆದರೆ ಇತರ ಕ್ಷೇತ್ರದಲ್ಲಿ ಬೆಳವಣಿಗೆ ನಿಯಮಿತವಾಗಿದ್ದು ಒಟ್ಟಾರೆಯಾಗಿ ಶೇ.12.5ರಷ್ಟು ನಿರುದ್ಯೋಗ ಸಮಸ್ಯೆಗೆ (ಶೇ.30ರಷ್ಟು ಯುವಜನತೆ ನಿರುದ್ಯೋಗಿಗಳು) ಕಾರಣವಾಗಿದೆ.

 ಈಗಿರುವ ಪರಿಸ್ಥಿತಿಯ ಬಗ್ಗೆ ನಾವು ತೃಪ್ತಿ ಹೊಂದಿಲ್ಲ. ಆದರೆ ರೂಹಾನಿಯ ಈ ಹಿಂದಿನ ನಾಲ್ಕು ವರ್ಷದ ಆಡಳಿತದಲ್ಲಿ ದೇಶ ತುಲನಾತ್ಮಕ ಅಭಿವೃದ್ಧಿ ಕಂಡಿದೆ. ಈ ವಿಶ್ವಾಸದಲ್ಲಿ ಈ ಬಾರಿಯೂ ರೂಹಾನಿಗೆ ಮತ ಹಾಕಿರುವುದಾಗಿ ಟೆಹ್ರಾನ್‌ನ ಅಲಿರೆಝ ನಿಕಪುರ್ ಎಂಬವರು ಮತದಾನ ನಡೆಸಿದ ಬಳಿಕ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News