ಹರಾಜಿಗಿದೆ ಚಂದ್ರಯಾನದಲ್ಲಿ ಆರ್ಮ್‌ಸ್ಟ್ರಾಂಗ್ ಬಳಸಿದ್ದ ಚೀಲ

Update: 2017-05-20 13:22 GMT

ನ್ಯೂಯಾರ್ಕ್, ಮೇ 20: ನೋಡಲು ಅದೊಂದು ಸಾಧಾರಣವಾದ ಚೌಕಾಕಾರದ ಬಿಳಿ ಬಣ್ಣದ ಚೀಲ. ಆದರೆ 1969ರಲ್ಲಿ ನಡೆದ ಚಂದ್ರಯಾನದಲ್ಲಿ ಪಾಲ್ಗೊಂಡಿರುವುದು ಈ ಚೀಲದ ಹೆಗ್ಗಳಿಕೆ.

 ಜುಲೈ 20ರಂದು ನ್ಯೂಯಾರ್ಕ್ ನಗರದ ಸೌತ್‌ಬೇಯಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಈ ಚೀಲ 4 ಮಿಲಿಯನ್ ಡಾಲರ್‌ಗೆ ಹರಾಜಾಗಬಹುದು ಎಂಬ ನಿರೀಕ್ಷೆಯಿದೆ. ಚಂದ್ರನ ಅಂಗಳದಿಂದ ಸಂಗ್ರಹಿಸಿದ ದೂಳಿನ ಶೇಷವನ್ನು ಹೊಂದಿರುವ ಈ ಚೀಲದ ಮೇಲೆ - ಲೂನಾರ್ ಸ್ಯಾಂಪಲ್ ರಿಟರ್ನ್ - ಎಂಬ ಲೇಬಲ್ ಹಚ್ಚಲಾಗಿದೆ.

ಚಂದ್ರನ ಮೇಲೆ ನಡೆದಾಡಿದ ಪ್ರಪ್ರಥಮ ಮಾನವ ಎನಿಸಿಕೊಂಡಿರುವ ನೀಲ್ ಆರ್ಮ್‌ಸ್ಟ್ರಾಂಗ್ 1969ರಲ್ಲಿ ನಡೆದ ಐತಿಹಾಸಿಕ ‘ಅಪೋಲೋ 11 ಯೋಜನೆಯಲ್ಲಿ’ ಚಂದ್ರನೆಡೆಗೆ ಪ್ರಯಾಣ ಬೆಳೆಸಿದಾಗ ಅವರು ಈ ಚೀಲವನ್ನು ತಮ್ಮಾಂದಿಗೆ ಒಯ್ದಿದ್ದರು. ಚಂದ್ರನ ಮೇಲ್ಮೈಯಿಂದ ಸಂಗ್ರಹಿಸಿದ ಪ್ರಥಮ ಮಾದರಿ(ಸ್ಯಾಂಪಲ್) ಯನ್ನು ಇದೇ ಚೀಲದಲ್ಲಿ ತುಂಬಿಸಿಕೊಂಡು ಭೂಮಿಗೆ ತರಲಾಗಿದೆ. ‘ಪ್ರಶಾಂತ ಸಾಗರ’ ಎಂದೇ ಕರೆಯಲಾಗುವ ಚಂದ್ರನ ಅಂಗಳದಿಂದ ಸಂಗ್ರಹಿಸಲಾದ ಕಲ್ಲಿನ ಚೂರು, ದೂಳು..ಇತ್ಯಾದಿಗಳನ್ನು ಈ ಚೀಲದಲ್ಲಿ ತುಂಬಿಸಿ ತರಲಾಗಿತ್ತು.

  ಅಪೋಲೋ 11 ಯೋಜನೆಯ 48ನೇ ವಾರ್ಷಿಕೋತ್ಸವದ ದಿನವಾದ ಜುಲೈ 20ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯು ಈ ಯೋಜನೆಯಲ್ಲಿ ಒಳಗೊಂಡಿದ್ದ ಪ್ರಾಚೀನ ವಸ್ತುಗಳ ಪ್ರಪ್ರಥಮ ಕಾನೂನುಬದ್ಧ ಮಾರಾಟ ಪ್ರಕ್ರಿಯೆಯಾಗಿದೆ ಎಂದು ನಾಸಾದ ಪ್ರದರ್ಶನ ಮತ್ತು ಪ್ರಾಚೀನ ವಸ್ತುಗಳ ವಿಭಾಗದ ಮುಖ್ಯಸ್ಥ ಜಿಮ್ ಹಲ್ ತಿಳಿಸಿದ್ದಾರೆ.

ಚಂದ್ರಯಾನದಲ್ಲಿ ಒಳಗೊಂಡಿರುವ ವಸ್ತುಗಳ ಮಾರಾಟಕ್ಕೆ ಕಾನೂನಿನಲ್ಲಿ ನಿಷೇಧವಿದ್ದರೂ ಕೆಲವು ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಲಾಗುತ್ತಿದೆ ಎನ್ನಲಾಗಿದೆ.

199ರ ಜುಲೈ 16ರಂದು ಮೂವರು ಗಗನಯಾತ್ರಿಗಳೊಂದಿಗೆ ಅಪೋಲೋ 11 ಚಂದ್ರನೆಡೆಗೆ ಪ್ರಯಾಣ ಬೆಳೆಸಿತ್ತು. ನಾಲ್ಕು ದಿನದ ಬಳಿಕ ಆರ್ಮ್‌ಸ್ಟ್ರಾಂಗ್ ಮತ್ತು ಎಡ್ವಿನ್ ‘ಬಝ್’ ಆಲ್ಡ್ರಿನ್ ಗಗನನೌಕೆ ‘ಈಗಲ್’ನ ಮೂಲಕ ಚಂದ್ರನ ಮೇಲ್ಮೈಗೆ ತಲುಪಿದ್ದರು. ಅಲ್ಲಿರುವ ಮಾದರಿಗಳನ್ನು ಈ ಗಗನಯಾತ್ರಿಗಳು ಸಂಗ್ರಹಿಸಿದ್ದರು. ಸುಮಾರು 22 ಗಂಟೆ ಚಂದ್ರನಲ್ಲಿದ್ದ ಈ ಗಗನಯಾತ್ರಿಗಳು ಬಳಿಕ ಭೂಮಿಯತ್ತ ಪ್ರಯಾಣ ಬೆಳೆಸಿದ್ದು ಜುಲೈ 24ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News