ಜೂ.3ರಿಂದ ಇವಿಎಂ ಸವಾಲು ಆರಂಭ:ಚು.ಆಯೋಗ
ಹೊಸದಿಲ್ಲಿ,ಮೇ 20: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ತಿರುಚಬಹುದಾಗಿದೆ ಎನ್ನುವುದನ್ನು ಸಾಬೀತುಗೊಳಿಸುವಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಒಡ್ಡಿರುವ ಸವಾಲು ಜೂ.3ರಿಂದ ಆರಂಭಗೊಳ್ಳಲಿದೆ. ಇದೇ ವೇಳೆ ಇವಿಎಂಗಳಲ್ಲಿ ಯಾವುದೇ ಕೈವಾಡ ನಡೆಸುವುದು ಅಸಾಧ್ಯ ಎಂಬ ತನ್ನ ನಿಲುವನ್ನು ಆಯೋಗವು ಪುನರುಚ್ಚರಿಸಿದೆ.
ದಿಲ್ಲಿಯ ವಿಜ್ಞಾನ ಭವನದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ನಸೀಂ ಝೈದಿ ಅವರು ಈ ವಿಷಯವನ್ನು ಪ್ರಕಟಿಸಿದರು.
ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದವರು ಇದುವರೆಗೂ ತಮ್ಮ ಆರೋಪವನ್ನು ಪುಷ್ಟೀಕರಿಸುವ ಯಾವುದೇ ರುಜುವಾತು ಅಥವಾ ವಿಶ್ವಾಸಾರ್ಹ ದಾಖಲೆಯನ್ನು ಆಯೋಗಕ್ಕೆ ಸಲ್ಲಿಸಿಲ್ಲ ಎಂದು ಅವರು ತಿಳಿಸಿದರು.
ಇವಿಎಂಗಳ ಇಂಟರ್ನಲ್ ಸರ್ಕ್ಯೂಟ್‌ನ್ನು ಬದಲಿಸುವುದು ಅಸಾಧ್ಯ ಎಂದ ಅವರು, ನಮ್ಮ ಇವಿಎಂಗಳು ಸದೃಢ ತಂತ್ರಜ್ಞಾನಗಳನ್ನು ಹೊಂದಿವೆ ಮತ್ತು ಅವುಗಳನ್ನು ತಿರುಚಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ಇವಿಎಂಗಳು ದೋಷಪೂರಿತವಾಗಿವೆ ಎಂಬ ಆಪ್‌ನ ಪ್ರತಿಪಾದನೆಯನ್ನು ತಳ್ಳಿಹಾಕಿದ ಅವರು, ಅವುಗಳಲ್ಲಿ ಯಾವದೇ ಕೈವಾಡ ಅಸಾದ್ಯ ಎಂದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ತರುವುದು ಎಲ್ಲ ಪಾಲುದಾರರ ಹೊಣೆ ಗಾರಿಕೆಯಾಗಿದೆ ಮತ್ತು ಈ ನಿಟ್ಟಿನಲ್ಲಿ ಆಯೋಗವು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಜನರು ಇವಿಎಂಗಳಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಬಿಎಸ್‌ಪಿ, ಆಪ್ ಸೇರಿದಂತೆ ಹಲವಾರು ಪ್ರಮುಖ ರಾಜಕೀಯ ಪಕ್ಷಗಳು ಹೇಳಿದ್ದವು.
ಭವಿಷ್ಯದ ಎಲ್ಲ ಚುನಾವಣೆಗಳಲ್ಲಿ ಇವಿಎಂಗಳ ಜೊತೆಗೆ ಮತದಾನ ದೃಢೀಕರಣ ಯಂತ್ರಗಳನ್ನು ಬಳಸಲಾಗುವುದು ಎಂದು ಆಯೋಗವು ಈಗಾಗಲೇ ಪ್ರಕಟಿಸಿದೆ.