ಇಟಾಲಿಯನ್ ಓಪನ್: ಸೆಮಿಫೈನಲ್‌ನಲ್ಲಿ ಸಾನಿಯಾಗೆ ಸೋಲು

Update: 2017-05-20 17:25 GMT

 ರೋಮ್(ಇಟಲಿ), ಮೇ 20: ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಅವರ ಸವಾಲು ಅಂತ್ಯಗೊಂಡಿದೆ. ಕಝಕ್‌ಸ್ತಾನದ ಯರೊಸ್ಲೊವಾ ಶ್ವೆಡೋವಾ ಜೊತೆಗೂಡಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಆಡಿದ ಸಾನಿಯಾ ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿದರು. ಉರುಗ್ವೆಯ ಪಾಬ್ಲೊ ಕ್ಯುವಾಸ್ ಜೊತೆಯಾಗಿ ಆಡಿದ್ದ ಬೋಪಣ್ಣ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಾರೆ.

 ಇಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೂರನೆ ಶ್ರೇಯಾಂಕದ ಸಾನಿಯಾ-ಶ್ವೆಡೋವಾ ಜೋಡಿ ತೈವಾನ್-ಸ್ಲೋವಾಕಿಯದ ಚಾನ್ ಯಂಗ್-ಜಾಂಗ್ ಹಾಗೂ ಮಾರ್ಟಿನಾ ಹಿಂಗಿಸ್ ವಿರುದ್ಧ 3-6, 6-7(7) ಸೆಟ್‌ಗಳಿಂದ ಸೋತಿದ್ದಾರೆ.

ಶುಕ್ರವಾರ 1 ಗಂಟೆ, 8 ನಿಮಿಷಗಳ ಕಾಲ ಏಕಪಕ್ಷೀಯವಾಗಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾನಿಯಾ-ಶ್ವೆಡೋವಾ ಜೋಡಿ ಇಟಲಿಯ ಮಾರ್ಟಿನಾ ಟ್ರೆವಿಸನ್ ಹಾಗೂ ಸಾರಾ ಇರಾನಿ ಅವರನ್ನು 6-4, 6-1 ಸೆಟ್‌ಗಳ ಅಂತರದಿಂದ ಸೋಲಿಸಿತ್ತು.

 ಬೋಪಣ್ಣ ಜೋಡಿಗೆ ಸೋಲು: ಪುರುಷರ ಡಬಲ್ಸ್ ಪಂದ್ಯದಲ್ಲಿ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಹಾಗೂ ಉರುಗ್ವೆಯ ಪಾಬ್ಲೊ ಕ್ಯುವಾಸ್ ಅವರು ಹೆರ್ಬರ್ಟ್ ಹಾಗೂ ನಿಕೊಲಸ್ ಮಹೂಟ್ ವಿರುದ್ಧ 6-7(5/7), 7-6(7-2), 10-12 ಸೆಟ್‌ಗಳ ಅಂತರದಿಂದ ಶರಣಾಗಿದೆ.

ಕಳೆದ ತಿಂಗಳು ಸ್ಪೇನ್‌ನ ಲೊಪೆಝ್ ಸಹೋದರರನ್ನು ಮಣಿಸಿದ್ದ ಬೋಪಣ್ಣ ಹಾಗೂ ಕ್ಯುವಾಸ್ ಜೋಡಿ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಪ್ರಶಸ್ತಿಯನ್ನು ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News