ಇಟಾಲಿಯನ್ ಓಪನ್: ಜೊಕೊವಿಕ್ ಸೆಮಿಫೈನಲ್‌ಗೆ

Update: 2017-05-20 17:19 GMT

ರೋಮ್, ಮೇ 20: ಇಟಾಲಿಯನ್ ಓಪನ್‌ನ ಮಳೆಬಾಧಿತ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನೇರ ಸೆಟ್‌ಗಳಿಂದ ಜಯ ಸಾಧಿಸಿರುವ ವಿಶ್ವದ ನಂ.2ನೆ ಆಟಗಾರ ನೊವಾಕ್ ಜೊಕೊವಿಕ್ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

 ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಅಂತಿಮ-8ರ ಪಂದ್ಯದಲ್ಲಿ ಸರ್ಬಿಯ ಆಟಗಾರ ಜೊಕೊವಿಕ್ ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು 6-1, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಎರಡನೆ ಶ್ರೇಯಾಂಕದ ಆಟಗಾರ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಆಸ್ಟ್ರೀಯದ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ. ಥೀಮ್ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್ ರಫೆಲ್ ನಡಾಲ್‌ರನ್ನು ಸೋಲಿಸಿ ಶಾಕ್ ನೀಡಿದ್ದರು.

ಮತ್ತೊಂದು ಸೆಮಿ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೇವ್ ಹಾಗೂ ಅಮೆರಿಕದ ಜಾನ್ ಇಸ್ನೇರ್‌ರನ್ನು ಎದುರಿಸಲಿದ್ದಾರೆ. ಜೊಕೊವಿಕ್ ಹಾಗೂ ಡೆಲ್ ಪೊಟ್ರೊ ನಡುವೆ ಶುಕ್ರವಾರ ನಡೆದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಮಳೆಯಿಂದಾಗಿ ಪಂದ್ಯ ನಿಂತಾಗ ಪಂದ್ಯದ ಸ್ಕೋರ್ 6-1, 1-2ರಲ್ಲಿತ್ತು. ಜೊಕೊವಿಕ್ ಮೊದಲ ಸೆಟ್‌ನ್ನು 44 ನಿಮಿಷಗಳಲ್ಲಿ ಗೆದ್ದುಕೊಂಡರು. ಒಟ್ಟು ಒಂದೂವರೆ ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಜಯ ಸಾಧಿಸಿದ ಜೊಕೊವಿಕ್ 8ನೆ ಬಾರಿ ಇಟಾಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News