ಕಿವೀಸ್ ವಿರುದ್ಧ ಹಾಕಿ ಟೆಸ್ಟ್ ಸರಣಿ: ಭಾರತಕ್ಕೆ ವೈಟ್‌ವಾಶ್

Update: 2017-05-20 17:21 GMT

ಹ್ಯಾಮಿಲ್ಟನ್(ನ್ಯೂಝಿಲೆಂಡ್), ಮೇ 20: ಭಾರತದ ಮಹಿಳಾ ಹಾಕಿ ತಂಡದ ಕಳಪೆ ಪ್ರದರ್ಶನಕ್ಕೆ ಅಂತ್ಯವೇ ಇಲ್ಲದಂತಾಗಿದೆ. ಶನಿವಾರ ನಡೆದ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್‌ಗೆ 2-6 ಅಂತರದಿಂದ ಶರಣಾಗಿರುವ ಭಾರತ ಟೆಸ್ಟ್ ಸರಣಿಯಲ್ಲಿ 0-5 ರಿಂದ ವೈಟ್‌ವಾಶ್ ಅನುಭವಿಸಿದೆ.

ಕಿವೀಸ್ ಆಟಗಾರ್ತಿಯರು ಆರಂಭದಲ್ಲೇ ಮೇಲುಗೈ ಸಾಧಿಸಿದ್ದು, ನಾಲ್ಕನೆ ನಿಮಿಷದಲ್ಲಿ ಒಲಿವಿಯಾ ಮೆರ್ರಿ ಮೊದಲ ಗೋಲು ಬಾರಿಸಿದರು. 15ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಒಲಿವಿಯಾ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು.

22ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ದೀಪಾ ಎಕ್ಕಾ ಭಾರತಕ್ಕೆ ಮೊದಲ ಗೋಲು ತಂದರು. ದೀಪಾ ಐದು ಪಂದ್ಯಗಳ ಸರಣಿಯಲ್ಲಿ ಸತತ 2ನೆ ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದರು. 27ನೆ ನಿಮಿಷದಲ್ಲಿ 3ನೆ ಗೋಲು ಬಾರಿಸಿದ ಆತಿಥೇಯ ಕಿವೀಸ್, ಭಾರತಕ್ಕೆ ತಿರುಗೇಟು ನೀಡಿ ಸ್ಕೋರನ್ನು 3-1ಕ್ಕೆ ತಲುಪಿಸಿತ್ತು.

ಭಾರತ 33ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಮತ್ತೊಂದು ಗೋಲು ಬಾರಿಸಿತು. ನಾಯಕಿ ರಾಣಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದರು. ಆಗ ಗೋಲಿನ ವ್ಯತ್ಯಾಸ 2-3ಕ್ಕೆ ತಲುಪಿತು. ಭಾರತಕ್ಕೆ ಸತತ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದರೂ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು.

ನಾಲ್ಕು ನಿಮಿಷಗಳ ಅಂತರದಲ್ಲಿ ಮೂರು ಗೋಲುಗಳನ್ನು ಬಾರಿಸಿದ ನ್ಯೂಝಿಲೆಂಡ್ ತಂಡ ಭಾರತದ ವಿರುದ್ಧ 6-2 ಮುನ್ನಡೆ ಸಾಧಿಸಿತು. ನಟಾಶಾ(37ನೆ ನಿಮಿಷ), ಸಮಂತಾ ಹ್ಯಾರಿಸನ್(38ನೆ ನಿ.) ಹಾಗೂ ಕಿರ್ಸ್ಟನ್(40ನೆ ನಿ.) ತಲಾ ಒಂದು ಗೋಲು ಬಾರಿಸಿ ಭಾರತಕ್ಕೆ ವಿಪರೀತ ಒತ್ತಡ ಹೇರಲು ಸಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News