ಮೇ 21 ರಂದು ಐಪಿಎಲ್ ಫೈನಲ್: ಪುಣೆ-ಮುಂಬೈ ಹಣಾಹಣಿ

Update: 2017-05-20 17:42 GMT

 ಹೈದರಾಬಾದ್, ಮೇ 20: ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ‘ಗ್ರಾಂಡ್ ಫಿನಾಲೆ’ ಮುತ್ತಿನ ನಗರಿಯಲ್ಲಿ ರವಿವಾರ ನಡೆಯಲಿದ್ದು, ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವನ್ನು ಎದುರಿಸಲಿರುವ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ಮೂರನೆ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಗುರಿ ಹಾಕಿಕೊಂಡಿದೆ.

ಪುಣೆ ತಂಡ ಈ ವರ್ಷದ ಐಪಿಎಲ್‌ನಲ್ಲಿ ಕ್ವಾಲಿಫೈಯರ್-1 ಸಹಿತ ಮೂರು ಪಂದ್ಯಗಳಲ್ಲಿ ಮುಂಬೈ ತಂಡವನ್ನು ಮಣಿಸಿ ಅಜೇಯ ದಾಖಲೆ ಕಾಯ್ದುಕೊಂಡಿದೆ. ಆದರೆ, ಫೈನಲ್ ಪಂದ್ಯ ವಿಭಿನ್ನವಾದುದು. ಮುಂಬೈ ನಾಲ್ಕನೆ ಬಾರಿ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

2013 ಹಾಗೂ 2015ರಲ್ಲಿ ಐಪಿಎಲ್ ಚಾಂಪಿಯನ್ ಟ್ರೋಫಿ ಜಯಿಸಿರುವ ಮುಂಬೈ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಎದುರಾಳಿ ಪುಣೆ ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ದಾಖಲೆ ಏಳನೆ ಬಾರಿ ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ.

ಮುಂಬೈ ತಂಡದಲ್ಲಿರುವ ಸ್ಟಾರ್ ಆಟಗಾರರಾದ ರೋಹಿತ್ ಶರ್ಮ, ಕೀರನ್ ಪೊಲಾರ್ಡ್, ಹರ್ಭಜನ್ ಸಿಂಗ್ ಹಾಗೂ ಅಂಬಟಿ ರಾಯುಡು ಈ ಹಿಂದೆ ಎರಡು ಬಾರಿ ಮುಂಬೈ ತಂಡ ಚಾಂಪಿಯನ್ ಆಗಿದ್ದ ವೇಳೆ ತಂಡದಲ್ಲಿದ್ದರು. ಇವರಿಗೆ ಫೈನಲ್‌ನಲ್ಲಿ ಹೇಗೆ ಆಡಬೇಕೆಂಬ ಬಗ್ಗೆ ಸ್ಪಷ್ಟ ಕಲ್ಪನೆಯಿದೆ.

ಮುಂಬೈ ತಂಡದಲ್ಲಿ ಹಲವು ಸ್ಟಾರ್ ಆಟಗಾರರಿದಾರೆ. ಜೋಸ್ ಬಟ್ಲರ್ ಸ್ವದೇಶಕ್ಕೆ ಮರಳಿದ ತಕ್ಷಣ ಅವರ ಜಾಗವನ್ನು ವಿಂಡೀಸ್‌ನ ಲೆಂಡ್ಲ್ ಸಿಮೊನ್ಸ್ ಸಮರ್ಥವಾಗಿ ತುಂಬುತ್ತಿದ್ದಾರೆ. ಮೈಕಲ್ ಮೆಕ್ಲಿನಘನ್(19 ವಿಕೆಟ್) ವಿಶ್ರಾಂತಿ ಪಡೆದಾಗ ಅವರ ಬದಲಿಗೆ ಮಿಚೆಲ್ ಜಾನ್ಸನ್ ಕಣಕ್ಕಿಳಿದಿದ್ದರು. ಅಂಬಟಿ ರಾಯುಡು ಬೆನ್ನುನೋವಿನಿಂದ ಚೇತರಿಸಿಕೊಂಡು ವಾಪಸಾದ ಹಿನ್ನೆಲೆಯಲ್ಲಿ ನಿತೀಶ್ ರಾಣಾ(333) ರಾಯುಡುವಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ಹರ್ಭಜನ್ ಸಿಂಗ್ ತಂಡದ ಮಿತವ್ಯಯಿ ಬೌಲರ್ ಆಗಿದ್ದಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಲೆಗ್-ಸ್ಪಿನ್ನರ್ ಕರ್ಣ್ ಶರ್ಮರ ಮೇಲೆ ವಿಶ್ವಾಸವಿರಿಸಿದೆ. ಎರಡನೆ ಕ್ವಾಲಿಫೈಯರ್ ಪಂದ್ಯದಲ್ಲಿ ಶರ್ಮ ಅಮೋಘ ಬೌಲಿಂಗ್ ಮಾಡಿ ಕೆಕೆಆರ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿದ್ದರು. ಮಾಲಿಂಗ ಹಾಗೂ ಜಸ್‌ಪ್ರಿತ್ ಬುಮ್ರಾ ಉತ್ತಮ ಡೆತ್ ಬೌಲರ್ ಆಗಿದ್ದಾರೆ. ಪೊಲಾರ್ಡ್, ಪಾಂಡೆ ಸಹೋದರರಾದ ಕೃನಾಲ್ ಹಾಗೂ ಹಾರ್ದಿಕ್ ಆಲ್‌ರೌಂಡರ್ ಪ್ರದರ್ಶನದಿಂದ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ನಾಯಕ ರೋಹಿತ್ ಶರ್ಮ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.

ಧೋನಿ ಪ್ರಮುಖ ಫೈನಲ್: ಈ ಫೈನಲ್ ಪಂದ್ಯ ಧೋನಿ ಪಾಲಿಗೆ ಅತ್ಯಂತ ಮುಖ್ಯವಾಗಿದೆ. 2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದ ಬಳಿಕ ಧೋನಿ 2008 ಹಾಗೂ 2015ರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆರು ಬಾರಿ ಫೈನಲ್ ಪಂದ್ಯವನ್ನಾಡಿದ್ದಾರೆ. ಚೆನ್ನೈ ತಂಡ ಧೋನಿ ನಾಯಕತ್ವದಲ್ಲಿ 2010 ಹಾಗೂ 2011ರ ಆವೃತ್ತಿಯಲ್ಲಿ ಚಾಂಪಿಯನ್ ಟ್ರೋಫಿ ಜಯಿಸಿತ್ತು.

ಭಾರತದ ಮಾಜಿ ನಾಯಕ ಧೋನಿಗೆ ಐಪಿಎಲ್ ಫೈನಲ್‌ನಲ್ಲಿ ಯಾವ ರೀತಿ ರಣನೀತಿ ರೂಪಿಸಬೇಕೆಂದು ಚೆನ್ನಾಗಿ ಗೊತ್ತಿದೆ. ಪುಣೆ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರು ಧೋನಿಯ ಅನುಭವವನ್ನು ನೆಚ್ಚಿಕೊಂಡಿದ್ದಾರೆ. ಆಸ್ಟ್ರೇಲಿಯದ ಸ್ಮಿತ್ ಐಪಿಎಲ್ ಟ್ರೋಫಿಯನ್ನು ಎತ್ತುವ ಮೂಲಕ ತನ್ನದೇ ದೇಶದ ಶೇನ್ ವಾರ್ನ್, ಆಡಮ್ ಗಿಲ್‌ಕ್ರಿಸ್ಟ್, ಡೇವಿಡ್ ವಾರ್ನರ್ ದಾಖಲೆಯನ್ನು ಸರಿಗಟ್ಟುವ ಗುರಿ ಹೊಂದಿದ್ದಾರೆ. ವಾರ್ನ್(ರಾಜಸ್ಥಾನ), ಗಿಲ್‌ಕ್ರಿಸ್ಟ್(ಡೆಕ್ಕನ್ ಚಾರ್ಜರ್ಸ್) ಹಾಗೂ ವಾರ್ನರ್(ಹೈದರಾಬಾದ್) ಈ ಹಿಂದೆ ನಾಯಕರಾಗಿ ಐಪಿಎಲ್ ಟ್ರೋಫಿ ಜಯಿಸಿದ್ದರು.

ಧೋನಿ ಈವರೆಗೆ ಪುಣೆ ತಂಡದ ಪರ ಕೆಲವೇ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಸನ್‌ರೈಸರ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ರನ್ ಚೇಸಿಂಗ್‌ನ ವೇಳೆ ತಂಡಕ್ಕೆ ಆಸರೆಯಾಗಿ ಸ್ಮರಣೀಯ ಪ್ರದರ್ಶನ ನೀಡಿದ್ದರು. ಮುಂಬೈನಲ್ಲಿ ನಡೆದಿದ್ದ ಕ್ವಾಲಿಫೈಯರ್-1 ಪಂದ್ಯದಲ್ಲಿ ಅಂತಿಮ ಎರಡು ಓವರ್‌ಗಳಲ್ಲಿ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಪುಣೆ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾಗಿದ್ದರು.

ಕಳೆದ ವರ್ಷ ತನ್ನ ಮೊದಲ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪುಣೆ ತಂಡ ಈ ವರ್ಷ ಧೋನಿಯ ಬದಲಿಗೆ ಸ್ಮಿತ್ ನಾಯಕತ್ವದಲ್ಲಿ ಸ್ಪರ್ಧೆಗೆ ಇಳಿದಿತ್ತು. ಗರಿಷ್ಠ ಮೊತ್ತಕ್ಕೆ(14.5 ಕೋ.ರೂ.) ಪುಣೆ ತಂಡದ ಪಾಲಾಗಿದ್ದ ಬೆನ್ ಸ್ಟೋಕ್ಸ್ ತನ್ನ ಬೆಲೆಗೆ ತಕ್ಕ ಪ್ರದರ್ಶನ ನೀಡಿದ್ದರು.

ಚಾಂಪಿಯನ್ಸ್ ಟ್ರೋಫಿ ಶಿಬಿರದಲ್ಲಿ ಪಾಲ್ಗೊಳ್ಳಲು ಮ್ಯಾಡ್ರಿಡ್‌ಗೆ ತೆರಳುವ ಮೊದಲು ಸ್ಟೋಕ್ಸ್ 316 ರನ್ ಗಳಿಸಿದ್ದರು ಹಾಗೂ 12 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಮೂಲಕ ಪುಣೆ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ನೆರವಾಗಿದ್ದರು.

 ಮಾಜಿ ಸೈನಿಕನ ಪುತ್ರ ರಾಹುಲ್ ತ್ರಿಪಾಠಿ(388 ರನ್) ಈ ವರ್ಷದ ಐಪಿಎಲ್‌ನಲ್ಲಿ ಗಮನ ಸೆಳೆದ ಹೊಸ ಆಟಗಾರನಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಮಿಂಚುತ್ತಿದ್ದಾರೆ. ನಾಯಕ ಸ್ಮಿತ್(421) ಹಾಗೂ ಮನೋಜ್ ತಿವಾರಿ(317) ತಂಡದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ.

ತಂಡದ ಪ್ರಮುಖ ಸ್ಪಿನ್ನರ್ ಇಮ್ರಾನ್ ತಾಹಿರ್(18 ವಿಕೆಟ್) ರಾಷ್ಟ್ರೀಯ ಕರ್ತವ್ಯದ ನಿಮಿತ್ತ ದಕ್ಷಿಣ ಆಫ್ರಿಕಕ್ಕೆ ವಾಪಸಾದ ಸಂದರ್ಭದಲ್ಲಿ ಜೈದೇವ್ ಉನದ್ಕಟ್(22 ವಿಕೆಟ್) ಅವರು ವಾಷಿಂಗ್ಟನ್ ಹಾಗೂ ಶಾರ್ದೂಲ್ ಠಾಕೂರ್ ಜೊತೆಗೂಡಿ ಪುಣೆಯ ಬೌಲಿಂಗ್ ದಾಳಿಯನ್ನು ಸರ್ಮರ್ಥವಾಗಿ ಮುನ್ನಡೆಸಿದ್ದರು.

ಪಂದ್ಯದ ಸಮಯ: ರಾತ್ರಿ 8:00

ಅಂಕಿ-ಅಂಶ

 04: ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ನಾಲ್ಕನೆ ಬಾರಿ ಫೈನಲ್‌ಗೆ ತಲುಪಿದೆ. 2010, 2013 ಹಾಗೂ 2015ರಲ್ಲಿ ಫೈನಲ್‌ಗೆ ತಲುಪಿದ್ದ ಮುಂಬೈ ತಂಡ ಚೆನ್ನೈಯನ್ನು ಎದುರಿಸಿತ್ತು. 2012 ಹಾಗೂ 2015ರಲ್ಲಿ ಪ್ರಶಸ್ತಿ ಜಯಿಸಿತ್ತು.

 07: ಎಂ.ಎಸ್. ಧೋನಿ ಏಳನೆ ಬಾರಿ ಐಪಿಎಲ್‌ನ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ ಧೋನಿಯಷ್ಟು ಯಾರೂ ಫೈನಲ್ ಆಡಿಲ್ಲ. ಧೋನಿ 2010 ಹಾಗೂ 2011ರಲ್ಲಿ ಪ್ರಶಸ್ತಿ ಜಯಿಸಿದ್ದರು. ಈ ತನಕದ ಆರು ಫೈನಲ್ ಪಂದ್ಯಗಳಲ್ಲಿ ಒಟ್ಟು 168 ರನ್ ಗಳಿಸಿದ್ದಾರೆ.

3-0: ಪುಣೆ ತಂಡ ಈ ವರ್ಷದ ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದುಕೊಂಡು ಅಜೇಯ ದಾಖಲೆ ಕಾಯ್ದುಕೊಂಡಿದೆ. ಎರಡು ಲೀಗ್ ಪಂದ್ಯಗಳನ್ನು ಕ್ರಮವಾಗಿ 7 ವಿಕೆಟ್ ಹಾಗೂ 3 ರನ್‌ಗಳಿಂದ ಗೆದ್ದುಕೊಂಡಿದ್ದ ಪುಣೆ ಕ್ವಾಲಿಫೈಯರ್-1ರಲ್ಲಿ 20 ರನ್‌ಗಳಿಂದ ಜಯ ಸಾಧಿಸಿತ್ತು.

17: ಪೂಣೆಯ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್(17 ವರ್ಷ) ಐಪಿಎಲ್ ಫೈನಲ್ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರ. 2008ರಲ್ಲಿ ರವೀಂದ್ರ ಜಡೇಜ ತನ್ನ 19ನೆ ಹರೆಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಫೈನಲ್ ಪಂದ್ಯ ಆಡಿದ್ದರು.2009ರಲ್ಲಿ ಮನೀಷ್ ಪಾಂಡೆ(19 ವರ್ಷ) ಆರ್‌ಸಿಬಿ ಪರ ಫೈನಲ್ ಪಂದ್ಯವನ್ನಾಡಿದ್ದರು.

205: ಕೀರನ್ ಪೊಲಾರ್ಡ್ ಮೂರು ಐಪಿಎಲ್ ಫೈನಲ್ ಪಂದ್ಯಗಳಲ್ಲಿ 205ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 2010ರಲ್ಲಿ 27 ರನ್, 2013ರಲ್ಲಿ ಅಜೇಯ 60 ಹಾಗೂ 2015ರಲ್ಲಿ 36 ರನ್ ಗಳಿಸಿದ್ದರು. 2013ರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದ ಪೊಲಾರ್ಡ್ ಐಪಿಎಲ್ ಫೈನಲ್‌ನಲ್ಲಿ ಮುಂಬೈನ ಪರ ಗರಿಷ್ಠ ಸ್ಟ್ರೈಕ್‌ರೇಟ್‌ನಲ್ಲಿ ಗರಿಷ್ಠ ರನ್ ಹಾಗೂ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

 180: ಮನೋಜ್ ತಿವಾರಿ ಪ್ರಸ್ತುತ ಐಪಿಎಲ್‌ನಲ್ಲಿ 16 ಹಾಗೂ 20 ಓವರ್‌ಗಳ ನಡುವೆ ಒಟ್ಟು 180 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ(176), ಧೋನಿ(162) ಹಾಗೂ ಪೊಲಾರ್ಡ್(158) ಇನಿಂಗ್ಸ್ ಅಂತ್ಯದಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು (15) ಸಿಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News