×
Ad

ಭಾರತದಲ್ಲಿ ಬಾಲಕಾರ್ಮಿಕರ ಸಂಖ್ಯೆ ಇಳಿಮುಖ,ಆದರೆ ಮಕ್ಕಳ ಲೈಂಗಿಕ ಶೋಷಣೆ ಹೆಚ್ಚುತ್ತಿದೆ:ಸತ್ಯಾರ್ಥಿ

Update: 2017-05-21 18:27 IST

ಹೊಸದಿಲ್ಲಿ,ಮೇ 21: ಭಾರತದಲ್ಲಿ ಬಾಲಕಾರ್ಮಿಕರ ಸಂಖ್ಯೆ ಗಣನೀಯವಾಗಿ ತಗ್ಗಿದೆ ಯಾದರೂ ಅವರ ವಿರುದ್ಧ ಲೈಂಗಿಕ ಹಿಂಸಾಚಾರದ ಘಟನೆಗಳು ಹೆಚ್ಚಾಗಿವೆ ಎಂದು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಷ್ ಸತ್ಯಾರ್ಥಿ ಅವರು ರವಿವಾರ ಇಲ್ಲಿ ತಿಳಿಸಿದರು.

ಐಎಎನ್‌ಎಸ್ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಸಮಸ್ಯೆಗಳ ಪರಿಹಾರಕ್ಕೆ ಸರಕಾರವನ್ನೇ ನೆಚ್ಚಿಕೊಳ್ಳುವಂತಿಲ್ಲ, ಯುವಜನರು ಜೀತದಾಳು ಸ್ಥಿತಿಯಲ್ಲಿರುವ ಮಕ್ಕಳ ಬಗ್ಗೆ ಜಾಗ್ರತಿಯನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದರು.

2001ರಲ್ಲಿ ದೇಶದಲ್ಲಿ ಬಾಲಕಾರ್ಮಿಕರ ಸಂಖ್ಯೆ 12.5 ಮಿ.ಗಳಷ್ಟು ಇದ್ದು, 2011ರಲ್ಲಿ ಅದು 10 ಮಿ.ಗೆ ಇಳಿದಿತ್ತು. ಈಗ ಅದು 4.2 ಮಿ.ಗೆ ತಗ್ಗಿದೆ ಎಂದ ಅವರು, ಈ ದತಾಂಶಗಳನ್ನು ತಾನು ದೃಢೀಕರಿಸಲಾಗುವುದಿಲ್ಲ, ಆದರೂ ಪರಿಸ್ಥಿತಿ ಸುಧಾರಿಸಿದೆ ಎಂದು ತಾನು ಹೇಳಬಲ್ಲೆ ಎಂದರು.

ಆದರೆ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ಅತ್ಯಾಚಾರದ ಘಟನೆಗಳು ತೀವ್ರವಾಗಿ ಹೆಚ್ಚಿವೆ ಎಂದ ಎನ್‌ಜಿಒ ಬಚ್ಪನ್ ಬಚಾವೋ ಆಂದೋಲನ್‌ನ ಮುಖ್ಯಸ್ಥರಾಗಿರುವ ಸತ್ಯಾರ್ಥಿ, ಜೊತೆಗೆ ಮಕ್ಕಳ ವಿರುದ್ಧ ಹಿಂಸಾಚಾರವು ಹೆಚ್ಚುತ್ತಿದ್ದು, ಇದು ಅಪಾಯಕಾರಿಯಾಗಿದೆ ಎಂದರು. ಪೊರ್ನೊಗ್ರಾಫಿ ಅಥವಾ ಅಶ್ಲೀಲತೆ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ ಎಂದು ದೂರಿದರು.

ವಿಶ್ವಾದ್ಯಂತ 160 ಮಿ.ಪೂರ್ಣಕಾಲಿಕ ಬಾಲಕಾರ್ಮಿಕರಿದ್ದಾರೆ ಎಂದ ಅವರು, ಈ ಪೈಕಿ ಅರ್ಧದಷ್ಟು ಮಕ್ಕಳು ಅತ್ಯಂತ ಕೆಟ್ಟದಾಗಿ ದುಡಿಸಿಕೊಳ್ಳಲಾಗುತ್ತಿದೆ. ಅವರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಅವರ ಪೈಕಿ ಸುಮಾರು ಐದು ಮಿಲಿಯ ಮಕ್ಕಳು ಗುಲಾಮರಾಗಿದ್ದು, ಅವರಿಗೆ ಯಾವುದೇ ಸ್ವಾತಂತ್ರವಿಲ್ಲ. ಅವರು ಮಾರಾಟ ಮಾಡಲ್ಪಟ್ಟಿದ್ದಾರೆ ಎಂದರು.

ಬಾಲಶ್ರಮ ಮತ್ತು ವಯಸ್ಕರಲ್ಲಿ ನಿರುದ್ಯೋಗದ ನಡುವೆ ಬಲವಾದ ಸಂಬಂಧವಿದೆ ಎಂದು ಪ್ರತಿಪಾದಿಸಿದ ಸತ್ಯಾರ್ಥಿ, ಸುಮಾರು 160 ಮಿ.ಮಕ್ಕಳು ದುಡಿಮೆಯಲ್ಲಿ ತೊಡಗಿದ್ದರೆ, ಸುಮಾರು 210 ಮಿಲಿಯನ್ ವಯಸ್ಕರು ನಿರುದ್ಯೋಗಿಗಳಾಗಿದ್ದಾರೆ. ವ್ಯಂಗ್ಯವೆಂದರೆ ಈ ಪೈಕಿ ಹೆಚ್ಚಿನವರು ಬಾಲಕಾರ್ಮಿಕರ ಪೋಷಕರಾಗಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News