ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ: ರಾಜನಾಥ್ ಸಿಂಗ್
ಸಿಕ್ಕಿಂ, ಮೇ 21: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಿರಂತರ ಮುಂದುವರಿಯುತ್ತಿರುವಂತೆಯೇ, ಸಿಕ್ಕಿಂನಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ಎನ್‌ಡಿಎ ಸರಕಾರ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಕ್ಕಿಂನ ಪೆಲ್ಲಿಂಗ್‌ನಲ್ಲಿ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಿಂಗ್, ಕಾಶ್ಮೀರದಲ್ಲಿ ಕ್ಷೋಭೆಗೆ ಉತ್ತೇಜನ ನೀಡುವ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಪಾಕ್ ಪ್ರಯತ್ನಿಸುತ್ತಿದೆ. ಆದರೆ ನಮ್ಮ ಸರಕಾರ ಕಾಶ್ಮೀರ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಲಿದೆ. ಕಾಶ್ಮೀರ ನಮ್ಮದು. ಕಾಶ್ಮೀರದ ಜನರೂ ನಮ್ಮವರೇ ಮತ್ತು ಕಾಶ್ಮೀರಿಯತ್ ಕೂಡಾ ನಮ್ಮದೇ ಎಂದರು.
2014ರಲ್ಲಿ ಮೋದಿ ಸರಕಾರದ ಪ್ರಮಾಣವಚನ ಸಮಾರಂಭಕ್ಕೆ ಪಾಕ್ ಸೇರಿದಂತೆ ನೆರೆಕರೆಯ ದೇಶಗಳ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಈ ಮೂಲಕ ನೂತನ ಸರಕಾರ ಎಲ್ಲಾ ರಾಷ್ಟ್ರಗಳೊಂದಿಗೂ ಸೌಹಾರ್ದಯುತ ಸಂಬಂಧ ಹೊಂದಿರಲು ಬಯಸುತ್ತದೆ ಎಂಬ ಸಂದೇಶ ಸಾರಲಾಗಿತ್ತು. ಆದರೆ ಪಾಕ್‌ನ ವರ್ತನೆ ಬದಲಾಗಲಿಲ್ಲ. ಪಾಕ್ ಬದಲಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಅವರು ಬದಲಾಗದಿದ್ದರೆ ನಾವೇ ಅವರನ್ನು ಬದಲಾವಣೆ ಮಾಡಬೇಕಾಗುತ್ತದೆ. ಜಾಗತೀಕರಣದ ಬಳಿಕದ ಪರಿಸ್ಥಿತಿಯಲ್ಲಿ ಒಂದು ದೇಶವು ಇನ್ನೊಂದು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುವಂತಿಲ್ಲ. ಯಾಕೆಂದರೆ ಉಳಿದ ರಾಷ್ಟ್ರಗಳು ಇದನ್ನು ಸಮ್ಮತಿಸುವುದಿಲ್ಲ ಎಂದು ರಾಜನಾಥ್ ನುಡಿದರು.
ಸಿಕ್ಕಿಂಗೆ ಮೂರು ದಿನಗಳ ಭೇಟಿ ನೀಡಿರುವ ಗೃಹ ಸಚಿವರು, ಅಲ್ಲಿ ನಡೆದ ಹಿಮಾಲಯ ರಾಜ್ಯಗಳ ಸಮ್ಮೇಳನದಲ್ಲಿ ಪಾಲ್ಗೊಂಡರಲ್ಲದೆ ಭಾರತ- ಚೀನಾ ಗಡಿ ಭಾಗದ ಭದ್ರತಾ ವ್ಯವಸ್ಥೆ ಮತ್ತು ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪರಾಮರ್ಶೆ ನಡೆಸಿದರು. ಅಲ್ಲದೆ ಭಾರತ- ಚೀನಾ ಗಡಿಭಾಗದ ನಥು ಲ ಸೇನಾ ಕೇಂದ್ರ ಮತ್ತು ಭಾರತ-ನೇಪಾಲ ಗಡಿಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು.