ಆದಿತ್ಯನಾಥ್ ಜೊತೆ ಭೇಟಿ ಆಹ್ವಾನ ನಿರಾಕರಿಸಿದ ಹುತಾತ್ಮ ಯೋಧರ ಕುಟುಂಬ

Update: 2017-05-21 14:42 GMT

 
 ಸಂಭಾಲ್, ಮೇ 21: ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಭೇಟಿಗೆ ಅವಕಾಶ ಕಲ್ಪಿಸುವ ಜಿಲ್ಲಾಡಳಿತದ ಆಹ್ವಾನವನ್ನು ಹುತಾತ್ಮ ಯೋಧ ಸುದೇಶ್ ಕುಮಾರ್ ಕುಟುಂಬ ನಿರಾಕರಿಸಿದೆ.


  ಕಳೆದ ವರ್ಷ ಸುದೇಶ್ ಕುಮಾರ್ ಜಮ್ಮು ಕಾಶ್ಮೀರ ಗಡಿಭಾಗದಲ್ಲಿ ಪಾಕ್ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದರು. ಸುದೇಶ್ ಕುಮಾರ್ ಹುಟ್ಟೂರು ಪನ್‌ಸುಖ ಮಿಲಕ್ ಗ್ರಾಮಕ್ಕೆ ಮುಖ್ಯಮಂತ್ರಿ ಭೇಟಿ ನೀಡಬೇಕೆಂದು ಒತ್ತಾಯಿಸಿ ಹುತಾತ್ಮ ಯೋಧನ ಕುಟುಂಬದವರು ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸುದೇಶ್ ಕುಮಾರ್ ಪತ್ನಿಯ ಆರೋಗ್ಯಸ್ಥಿತಿ ಹದಗೆಟ್ಟಿದ್ದು ಅವರ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಬೇಕೆಂಬುದು ಇವರ ಒತ್ತಾಯವಾಗಿತ್ತು.


  ಆದರೆ ಮೊರಾದಾಬಾದ್‌ಗೆ ರವಿವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ಹುತಾತ್ಮ ಯೋಧನ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಮುಖ್ಯಮಂತ್ರಿ ಜೊತೆ ಭೇಟಿಗೆ ಅವಕಾಶ ನೀಡುವುದಾಗಿ ಜಿಲ್ಲಾಡಳಿತ ನೀಡಿದ ಆಹ್ವಾನವನ್ನು ಹುತಾತ್ಮ ಯೋಧನ ಕುಟುಂಬ ವರ್ಗದವರು ನಿರಾಕರಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ತಮ್ಮ ಊರಿಗೆ ಭೇಟಿ ನೀಡುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.
 ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸುವಂತೆ ಯೋಧನ ಕುಟುಂಬವರ್ಗಕ್ಕೆ ತಿಳಿಸಲಾಯಿತು. ಅಲ್ಲದೆ ಕುಟುಂಬದ ಇಬ್ಬರು ಸದಸ್ಯರಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗುವ ಅವಕಾಶದ ಆಹ್ವಾನ ನೀಡಲಾಯಿತು. ಆದರೆ ಅವರು ನಿರಾಕರಿಸಿದ್ದಾರೆ. ಉಪವಾಸ ನಿರತರ ಆರೋಗ್ಯಸ್ಥಿತಿ ಪರೀಕ್ಷಿಸಲು ವೈದ್ಯರ ತಂಡವೊಂದನ್ನು ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆರ್.ಪಿ.ಯಾದವ್ ತಿಳಿಸಿದ್ದಾರೆ.


 ಹುತಾತ್ಮ ಯೋಧನ ಮನೆಗೆ ಮತ್ತೊಮ್ಮೆ ಭೇಟಿ ನೀಡುವುದಾಗಿ ಬಿಜೆಪಿ ನಾಯಕರು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಕುಟುಂಬದವರು ದೂರಿದ್ದಾರೆ. ಮುಖ್ಯಮಂತ್ರಿ ತಮ್ಮ ಮನೆಗೆ ಭೇಟಿ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹುತಾತ್ಮ ಯೋಧನ ತಾಯಿ ಹೇಳಿದ್ದಾರೆ. ಹಲವು ರಾಜಕಾರಣಿಗಳು ಮನೆಗೆ ಭೇಟಿ ನೀಡಿ ಆಶ್ವಾಸನೆಯ ಸುರಿಮಳೆ ಹರಿಸಿದ್ದಾರೆ. ಆದರೆ ಯಾವುದೂ ಈಡೇರಿಲ್ಲ ಎಂದು ಹುತಾತ್ಮ ಯೋಧನ ಪತ್ನಿ ಕವಿತಾ ಕುಮಾರಿ ದೂರಿದ್ದಾರೆ.


ನಮ್ಮ ಕುಟುಂಬಕ್ಕೆ ಪೆಟ್ರೋಲ್ ಪಂಪ್ ಆರಂಭಿಸಲು ವ್ಯವಸ್ಥೆ ಮಾಡಿಕೊಡುವುದಾಗಿ, ಮನೆಗೆ ಸಂಪರ್ಕ ಸಾಧಿಸಲು ರಸ್ತೆ ನಿರ್ಮಾಣ, ಗ್ರಾಮದಲ್ಲಿ ಯೋಧ ಸುದೇಶ್ ಕುಮಾರ್ ಅವರ ಸ್ಮಾರಕ ನಿರ್ಮಾಣ, ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಗೆ ಸುದೇಶ್ ಕುಮಾರ್ ಹೆಸರಿಡುವುದು- ಇತ್ಯಾದಿ ಭರವಸೆಗಳನ್ನು ಬಿಜೆಪಿ ನಾಯಕರು ನೀಡಿದ್ದರು. ಆದರೆ ಎಲ್ಲವೂ ಹುಸಿಯಾಗಿದೆ ಎಂದು ಯೋಧನ ಸಹೋದರ ಮನೋಜ್ ಕುಮಾರ್ ಹೇಳಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರಲ್ಲಿ ನಮಗೆ ನಂಬಿಕೆ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಗ್ರಾಮಕ್ಕೆ ಆಗಮಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದು ಇನ್ನೋರ್ವ ಸೋದರ ಅನಿಲ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News